ಚಾಮರಾಜನಗರ: ರಾಜ್ಯದಲ್ಲಿ ಹುಲಿ ಉಗುರು ಹೊಂದಿದ್ದ ಆರೋಪದಲ್ಲಿ ಸೆಲೆಬ್ರಿಟಿಗಳು ವಿವಾದಕ್ಕೀಡಾದ ಬಳಿಕ ವನ್ಯಜೀವಿ ವಸ್ತುಗಳನ್ನು ಹೊಂದುವುದು 'ಅಪರಾಧ' ಎಂದು ಸಾರ್ವಜನಿಕರಿಗೆ ಮನದಟ್ಟಾಗುತ್ತಿದೆ. ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ದೀಪ್ ಜೆ.ಕಂಟ್ರಾಕ್ಟರ್ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ಯ ಕುರಿತಾಗಿ ಈಟಿವಿ ಭಾರತ್ ಜೊತೆ ಮಾತನಾಡುತ್ತಾ ವಿವರವಾದ ಮಾಹಿತಿ ನೀಡಿದರು.
ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ 1972ರಲ್ಲಿ ಈ ಕಾಯ್ದೆ ಮೊದಲು ಜಾರಿಗೆ ಬಂತು. ಬಳಿಕ ಹಲವು ಬಾರಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು. 2022ರಲ್ಲಿ ಮತ್ತೊಂದು ತಿದ್ದುಪಡಿಯಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಮುಖ್ಯವಾಗಿ 1 ರಿಂದ 4 ರವರೆಗೆ ಶೆಡ್ಯೂಲ್‌ಗಳಿರುತ್ತದೆ. ಈ 4 ಶೆಡ್ಯೂಲ್ಗಳಲ್ಲಿ ಯಾವ ವನ್ಯಜೀವಿ ಮತ್ತು ಸಸ್ಯವರ್ಗಗಳನ್ನು ಪಟ್ಟಿ ಮಾಡಲಾಗಿದೆಯೋ ಅಂತಹ ಪ್ರಾಣಿಗಳು, ಸಸ್ಯಗಳಿಗೆ ನಾವು ಯಾವುದೇ ರೀತಿಯ ಹಾನಿ ಉಂಟು ಮಾಡುವಂತಿಲ್ಲ. ಆದ್ದರಿಂದ ಈ ಕಾಯ್ದೆಯಡಿ ಇವುಗಳಿಗೆ ರಕ್ಷಣೆ ನೀಡಲಾಗುತ್ತದೆ.
ನಾಲ್ಕು ಶೆಡ್ಯೂಲ್ಗಳಲ್ಲಿ ಪಟ್ಟಿಯಾಗಿರುವ ಪ್ರಾಣಿಗಳ ಅಥವಾ ಸಸ್ಯಗಳ ವಸ್ತುಗಳನ್ನು ಇಟ್ಟುಕೊಳ್ಳುವಂತಿಲ್ಲ. ಏನಾದರೂ ಕಾಡಿನಿಂದ ಆಚೆ ತಂದರೆ ದಂಡದೊಂದಿಗೆ ಶಿಕ್ಷೆ ಆಗುತ್ತದೆ. ನೈಸರ್ಗಿಕವಾಗಿ ಹೊಲ-ಗದ್ದೆಗಳಲ್ಲಿ ನವಿಲಿನ ಗರಿ, ಮುಳ್ಳುಹಂದಿಯ ಮುಳ್ಳುಗಳು ಬಿದ್ದಿರುವುದನ್ನು ಇಟ್ಟುಕೊಳ್ಳಬಹುದು. ಇಟ್ಟುಕೊಂಡರೆ ಶಿಕ್ಷೆ ಆಗುತ್ತದೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಆದರೆ ಕಾಡಿನಿಂದ ಪ್ರಾಣಿಯನ್ನು ಕೊಂದು ತೆಗೆದುಕೊಂಡಿದ್ದರೆ ಖಂಡಿತವಾಗಿಯೂ ಶಿಕ್ಷೆ ಆಗುತ್ತದೆ.
ಕೆಲವೊಮ್ಮೆ ಹೊಲ-ಗದ್ದೆಗಳಲ್ಲಿ ವನ್ಯಜೀವಿಗಳ ವಸ್ತುಗಳು ನೈಸರ್ಗಿಕವಾಗಿ ಬಿದ್ದಿವೆ ಎಂದು ನೀವು ಹೇಳಬಹುದು. ಆದರೆ, ಅದನ್ನು ಅರಣ್ಯ ಇಲಾಖೆಗೆ ಹೇಗೆ ಸಾಬೀತುಪಡಿಸುತ್ತೀರಿ? ಹಾಗಾಗಿ, ಎಲ್ಲಿಯಾದರೂ ವನ್ಯಜೀವಿಗಳ ವಸ್ತುಗಳು ಸಿಕ್ಕರೆ, ಅದನ್ನು ಅಲ್ಲಿಯೇ ಬಿಡುವುದು ಉತ್ತಮ. ಏಕೆಂದರೆ ಅದರಿಂದ ನಮಗೆ ಯಾವುದೇ ಉಪಯೋಗವಿಲ್ಲ. ಪುರಾತನ ವಸ್ತುಗಳು ವಂಶಪಾರಂಪರ್ಯವಾಗಿ ಬಂದಿದ್ದರೆ ಅದನ್ನು ಪಿಸಿಸಿಎಫ್ ಗಮನಕ್ಕೆ ತಂದು ಪರವಾನಗಿ ಪಡೆದುಕೊಳ್ಳಬಹುದು. ಆದರೆ ಅದು ಪುರಾತನವಾಗಿರಬೇಕು. 1972 ಕಾಯ್ದೆ ನಂತರ ಸಾಕಷ್ಟು ಕಳ್ಳಬೇಟೆಗೆ ಕಡಿವಾಣ ಬಿದ್ದಿದ್ದು ವನ್ಯಜೀವಿ ಸಂರಕ್ಷಣೆ ದಕ್ಷತೆಯಿಂದ ಮಾಡಲಾಗುತ್ತಿದೆ ಎಂದು ಡಿಸಿಎಫ್ ವಿವರಿಸಿದರು.
1999 ಮತ್ತು 2000 ಇಸವಿಗಳಲ್ಲಿ ಸಾಕಷ್ಟು ಪ್ರಮಾಣ ಕಾಡುಗಳ್ಳತನ ಹೆಚ್ಚಾಗಿತ್ತು. ಈ ವೇಳೆ ಕೇಂದ್ರ ಸರ್ಕಾರ ವನ್ಯಜೀವಿ ಕಾಯ್ದೆಯಡಿ ಸಾಕಷ್ಟು ಬದಲಾವಣೆಗಳನ್ನು ತಂದು ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಕಾಡಿವಾಣ ಹಾಕಲಾಯಿತು. ನಂತರ ನಮ್ಮಲ್ಲಿ ಆ್ಯಂಟಿ ಫೋರ್ಸ್ ಕ್ಯಾಂಪ್ ಮಾಡಿರುತ್ತೇವೆ. ಕಾಡಿನೊಳಗೆ ನಮ್ಮವರು 24 ಗಂಟೆ ವಾಸ ಮಾಡುತ್ತಾ, ದಿನಕ್ಕೆ 10 ರಿಂದ 20 ಕಿ.ಮೀ ಪೆಟ್ರೋಲಿಂಗ್ ಮಾಡುತ್ತಾರೆ. ಈ ಸಂದರ್ಭದಲ್ಲಿ ಏನಾದರೂ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದರೆ ನಮಗೆ ಮಾಹಿತಿ ನೀಡುತ್ತಾರೆ. ನಾವು ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಸಿಎಫ್ ಹೇಳಿದರು.
ಇದನ್ನೂ ಓದಿ: ಅಕ್ರಮ ವನ್ಯಜೀವಿ ಉತ್ಪನ್ನವನ್ನು ಸರ್ಕಾರಕ್ಕೆ ಮರಳಿಸಲು ಕೊನೆ ಅವಕಾಶ ನೀಡುವ ಚಿಂತನೆ: ಸಚಿವ ಈಶ್ವರ್ ಖಂಡ್ರೆ