ಗುಂಡ್ಲುಪೇಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಎಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿದಿದ್ದರೂ ಸಹ ಕೇಂದ್ರ ಸರ್ಕಾರ ಬಡವರ ಜೇಬಿಗೆ ಕತ್ತರಿ ಹಾಕಲು ಪಿತೂರಿ ಮಾಡಿರುವುದು ಖಂಡನೀಯ. ಹಾಗಾಗಿ ನರೇಂದ್ರ ಮೋದಿ ಅವರ ಸರ್ಕಾರ ಈ ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಕೆ ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕು ಬಿಎಎಸ್ಪಿ ಅಧ್ಯಕ್ಷ ಕಾಂತರಾಜ್ ಅಸುರ ಮಾತನಾಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತಂದಿರುವುದು ರೈತ ವಿರೋಧಿಯಾಗಿದೆ. ಇದರಿಂದ ಬಡ ರೈತರು ಭೂಮಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಸಿದರು.