ಚಾಮರಾಜನಗರ : ಅರ್ಚಕರು ಮತ್ತು ಅವರ ಸಂಬಂಧಿಕರಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆ ಪೂಜೆಗೆ ಜನರಿಲ್ಲದೇ ಯಳಂದೂರು ತಾಲೂಕಿನ ಬಿಳಿಗಿರಿ ರಂಗನಾಥ ಸ್ವಾಮಿಗೆ ದೇವಾಲಯ ಇಂದು ಸ್ಥಬ್ದವಾಗಿತ್ತು.
ದೇಗುಲದ ಇಬ್ಬರು ಅರ್ಚಕರು, ಇಬ್ಬರು ಪರಿಚಾರಿಕರು ಅವರ ನಾಲ್ವರು ಕುಟುಂಬಸ್ಥರು, ದೇವಾಲಯದ ಸಿಬ್ಬಂದಿ ಸೇರಿದಂತೆ ಒಟ್ಟು 16 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ದೇವಾಲಯ ಬಂದಾಗಿದೆ. ಹೀಗಾಗಿ, ದೇವರ ದರ್ಶನ ಪಡೆಯಲು ದೂರದ ಊರುಗಳಿಂದ ಬಂದವರು ನಿರಾಸೆಯಿಂದ ತೆರಳುವಂತಾಯಿತು.
ಈ ಕುರಿತು ಚಾಮರಾಜನಗರ ಉಪವಿಭಾಗಧಿಕಾರಿ ದಿಲೀಪ್ ಬದೋಲೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದು, ದೇವಸ್ಥಾನ ಮುಚ್ಚಲು ಯಾವುದೇ ಆದೇಶ ಬಂದಿಲ್ಲ. ಪೂಜೆ ಮಾಡಲು ಯಾರೂ ಇಲ್ಲದಿದ್ದರಿಂದ ದೇವಸ್ಥಾನದ ಬಾಗಿಲು ತೆಗೆದಿರಲಿಲ್ಲ. ವೈಖಾನಸ ಪದ್ಧತಿಯಂತೆ ತಾತ್ಕಾಲಿಕ ಪೂಜೆ ಮಾಡಲು ಅರ್ಚಕರೊಬ್ಬರು ಒಪ್ಪಿದ್ದು, ಶುಕ್ರವಾರ ದೇವಾಲಯ ತೆರೆಯಲಾಗುತ್ತದೆ ಎಂದು ತಿಳಿಸಿದರು.
ಓದಿ : ಮುಷ್ಕರಲ್ಲಿದ್ದ ಸಾರಿಗೆ ನೌಕರರಿಗೆ ಶಾಕ್: 96 ತರಬೇತಿನಿರತ ನೌಕರರು ವಜಾ
ಕೆಲ ದಿನಗಳ ಹಿಂದೆಯಷ್ಟೇ ದೇವಾಲಯದ ಜೀರ್ಣೋದ್ಧಾರ ಪೂರ್ಣಗೊಂಡು ವಿಜೃಂಭಣೆಯಿಂದ ಸಂಪ್ರೋಕ್ಷಣೆ ನಡೆದಿತ್ತು. ಇದಾದ ಮೂರು ದಿನಗಳ ಬಳಿಕ ಜಿಲ್ಲಾಧಿಕಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅರ್ಚಕರು ಮತ್ತು ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಯಿಗಿದೆ.
ಇಂದು ಜಿಲ್ಲೆಯಲ್ಲಿ 64 ಹೊಸ ಕೋವಿಡ್ ಕೇಸ್ ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 186ಕ್ಕೆ ಏರಿಕೆಯಾಗಿದೆ. ಇಂದು 20 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 6 ಮಂದಿ ಐಸಿಯುನಲ್ಲಿದ್ದಾರೆ. 832 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.