ಚಾಮರಾಜನಗರ: ಕೋವಿಡ್ ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದ್ದರೂ ವಿಐಪಿಗಳು ಮಾತ್ರ ಸಕಲ ಸೇವೆಗಳನ್ನೂ, ದರ್ಶನವನ್ನು ಮಾಡುತ್ತಿದ್ದಾರೆ.
ಗುರುವಾರ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಆವರಣದಲ್ಲಿ ಸಚಿವರು ತಮ್ಮ ಕುಟುಂಬ ಸಮೇತ ಹುಲಿವಾಹನ ಸೇವೆ ಸಲ್ಲಿಸಿರುವುದು ಭಕ್ತರ ಕೆಂಗಣ್ಣಿಗೆ ಕಾರಣವಾಗಿದೆ. ರಥೋತ್ಸವ, ಹುಲಿವಾಹನ ಸೇವೆ ಸಲ್ಲಿಸಲು ಭಕ್ತರಿಗೆ ನಿರ್ಬಂಧವಿದೆ. ಆದರೆ, ಸಚಿವರಿಗೋಸ್ಕರ ಹುಲಿ ವಾಹನ ಉತ್ಸವಕ್ಕೂ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಅವಕಾಶ ಮಾಡಿಕೊಡುವ ಮೂಲಕ ಜನರಿಗೊಂದು, ವಿಐಪಿಗಳಿಗೊಂದು ಕಾನೂನು ಎಂಬ ಇಬ್ಬಗೆ ನೀತಿ ಅನುಸರಿಸಿದೆ.
ಕೃಷಿ ಸಚಿವರಿಗೆ ಮಹದೇಶ್ವರ ಬೆಟ್ಟದಲ್ಲಿ ಯಾವ ಸರ್ಕಾರಿ ಕೆಲಸವೂ ಇರಲಿಲ್ಲ. ಆದರೆ ಸರ್ಕಾರಿ ಕೆಲಸ ನೆಪದಲ್ಲಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಮಾವಾಸ್ಯೆ ಪೂಜೆಗಾಗಿಯೇ ಸಚಿವ ಬಿ.ಸಿ.ಪಿ ಬಂದಿದ್ದು ಬೆಟ್ಟದಲ್ಲಿ ವಾಸ್ತವ್ಯ ಹೂಡಿರುವ ಆರೋಪ ಕೇಳಿಬಂದಿದೆ.
ಈ ಹಿಂದೆ ಸಚಿವ ಈಶ್ವರಪ್ಪ ಬೆಟ್ಟದ ರಾಷ್ಟ್ರಪತಿ ಭವನದಲ್ಲಿ ತಂಗಿ, ಮಲೆ ಮಹದೇಶ್ವರನ ದರ್ಶನ ಪಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿತ್ತು.