ಚಾಮರಾಜನಗರ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಪಕ್ಷಗಳ ಕಚೇರಿಗಳಲ್ಲಿ ಬಿರುಸಿನ ಚರ್ಚೆ ಶುರುವಾಗಿದ್ದರೆ, ಮತದಾರ ಎಲ್ಲವನ್ನೂ ಗಮನಿಸುತ್ತಿದ್ದಾನೆ. ಈ ಹೊತ್ತಿನಲ್ಲಿ ಪ.ಜಾತಿ ಮೀಸಲು ಕ್ಷೇತ್ರವಾಗಿರುವ ಚಾಮರಾಜನಗರದ ಸಂಪೂರ್ಣ ಚಿತ್ರಣ ಇಲ್ಲಿದೆ. ಜಿಲ್ಲೆಯ ನಾಲ್ಕು ಮತ್ತು ಮೈಸೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳು ಲೋಕಸಭೆ ಚುನಾವಣೆಗೆ ಒಳಪಡಲಿದ್ದು, 4 ಕಾಂಗ್ರೆಸ್, 1 ಜೆಡಿಎಸ್, 1 ಬಿಎಸ್ಪಿ ಚುನಾಯಿತ ಪ್ರತಿನಿಧಿಗಳಿದ್ದಾರೆ.
ಹೆಚ್.ಡಿ.ಕೋಟೆ:ಕಾಂಗ್ರೆಸ್ನ ಅನಿಲ್ ಚಿಕ್ಕಮಾದು ಶಾಸಕರಾಗಿದ್ದು, ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರ ಇದಾಗಿದೆ. 107046 ಪುರುಷ ಮತದಾರರು, 105201 ಮಹಿಳಾ ಮತದಾರರು, ಇತರೆ 7 ಮಂದಿ ಮತದಾರರಿದ್ದಾರೆ.
ನಂಜನಗೂಡು: ಇಲ್ಲಿ ಶ್ರೀನಿವಾಸಪ್ರಸಾದ್ ಅಳಿಯ ಹರ್ಷವರ್ಧನ್ ಬಿಜೆಪಿಯಿಂದ ಚುನಾಯಿತರಾಗಿದ್ದು, 104610 ಪುರುಷರು, 103382 ಮಹಿಳೆಯರು, 11 ಮಂದಿ ಇತರೆ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.
ವರುಣ: ಈ ಕ್ಷೇತ್ರದಿಂದ ಡಾ. ಯತೀಂದ್ರ ಸಿದ್ದರಾಮಯ್ಯ ಕಾಂಗ್ರೆಸ್ನಿಂದ ಚುನಾಯಿತರಾಗಿದ್ದು, ಇಲ್ಲಿ 111348 ಪುರುಷ ಮತದಾರರು, 108849 ಮಹಿಳಾ ಮತದಾರರು, 19 ಮಂದಿ ಇತರೆ ಮತದಾರರಿದ್ದಾರೆ.
ಟಿ.ನರಸೀಪುರ: ಜೆಡಿಎಸ್ನಿಂದ ಎಂ.ಅಶ್ವಿನ್ ಕುಮಾರ್ ಚುನಾಯಿತರಾಗಿದ್ದು, ಇಲ್ಲಿ 98032 ಪುರುಷ ಮತದಾರರು, 98831 ಮಹಿಳೆಯರು, 12 ಮಂದಿ ಇತರೆ ಮತದಾರರಿದ್ದಾರೆ.
ಹನೂರು: ಆರ್.ನರೇಂದ್ರ ಇಲ್ಲಿ ಮೂರನೇ ಬಾರಿಗೆ ಕಾಂಗ್ರೆಸ್ನಿಂದ ಚುನಾಯಿತರಾಗಿದ್ದಾರೆ. 105569 ಪುರುಷ ಮತದಾರರು, 102123 ಮಹಿಳಾ ಮತದಾರರು, 14 ಮಂದಿ ಇತರೆ ಮತದಾರರಿದ್ದಾರೆ.
ಕೊಳ್ಳೇಗಾಲ: ಬಿಎಸ್ಪಿಯಿಂದ ಎನ್.ಮಹೇಶ್ ಶಾಸಕರಾಗಿದ್ದು, ಮೈತ್ರಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ 104568 ಪುರುಷ ಮತದಾರರು, 106001 ಮಹಿಳಾ ಮತದಾರರು ಹಾಗೂ 18 ಮಂದಿ ಇತರೆ ಮತದಾರರಿದ್ದಾರೆ.
ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಪ್ರತಿನಿಧಿಸುವ ಕ್ಷೇತ್ರವಾಗಿದ್ದು, ಇದು ಕಾಂಗ್ರೆಸ್ ವಶದಲ್ಲಿದೆ. 101125 ಪುರುಷ ಮತದಾರರು, 104069 ಮಹಿಳಾ ಮತದಾರರು ಹಾಗೂ 16 ಮಂದಿ ಇತರೆ ಮತದಾರರಿದ್ದಾರೆ.
ಗುಂಡ್ಲುಪೇಟೆ: ಸಿ.ಎಸ್. ನಿರಂಜನ ಕುಮಾರ್ ಬಿಜೆಪಿಯಿಂದ ಆಯ್ಕೆಯಾಗಿದ್ದು, ಈ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದು ವಿಶೇಷ. 102094 ಪುರುಷ ಮತದಾರರು, 104085 ಮಹಿಳಾ ಮತದಾರರು ಹಾಗೂ 14 ಮಂದಿ ಇತರೆ ಮತದಾರರಿದ್ದಾರೆ. 8 ವಿಧಾನಸಭಾ ಕ್ಷೇತ್ರಗಳಿಂದ 834392 ಪುರುಷ ಮತದಾರರು, 832541 ಮಹಿಳಾ ಮತದಾರರು, 111 ಮಂದಿ ಇತರೆ ಮತದಾರರಿದ್ದು, ಒಟ್ಟು 1667044 ಮತದಾರರಿದ್ದಾರೆ.
ಅಭ್ಯರ್ಥಿಗಳ ಪಟ್ಟಿ ಹೀಗಿದೆ: ಮೂಲ ಮಾಹಿತಿ ಪ್ರಕಾರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ ನಡೆಯುವ ನಿರೀಕ್ಷೆ ಇದೆ. ಕಾಂಗ್ರೆಸ್ನಿಂದ ಹಾಲಿ ಸಂಸದ ಆರ್.ಧ್ರುವನಾರಾಯಣ ಸ್ಪರ್ಧಿಸಲಿದ್ದು, ಬಿಜೆಪಿಯಿಂದ ಅಭ್ಯರ್ಥಿ ಆಯ್ಕೆಯಾಗಿಲ್ಲ. ಇನ್ನು ಶ್ರೀನಿವಾಸಪ್ರಸಾದ್ ಸ್ಪರ್ಧಿಸಬೇಕೆಂಬುದು ಸ್ಥಳೀಯ ನಾಯಕರ ಒತ್ತಾಯವಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ, ಡಾ. ಮೋಹನ್, ಎಂ.ಶಿವಣ್ಣ ಮತ್ತು ಕಾಗಲವಾಡಿ ಶಿವಣ್ಣ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ. ಉಳಿದಂತೆ ಬಿಎಸ್ಪಿ, ಸಿಪಿಐ, ರೈತ ಸಂಘ, ಎಎಪಿಯಿಂದ ಅಭ್ಯರ್ಥಿಗಳು ಸ್ಪರ್ಧಿಸಲಿರುವ ಮಾಹಿತಿ ಇದೆ.
ಡಿಸಿ ಸುದ್ದಿಗೋಷ್ಠಿ:
ಹೆಚ್.ಡಿ.ಕೋಟೆಯಲ್ಲಿ 284, ನಂಜನಗೂಡಿನಲ್ಲಿ 251, ವರುಣದಲ್ಲಿ 263, ಟಿ.ನರಸೀಪುರದಲ್ಲಿ 227, ಹನೂರಿನಲ್ಲಿ 247, ಕೊಳ್ಳೇಗಾಲದಲ್ಲಿ 243, ಚಾಮರಾಜನಗರದಲ್ಲಿ 239 ಹಾಗೂ ಗುಂಡ್ಲುಪೇಟೆಯಲ್ಲಿ 251 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ದಿನಾಂಕ 26.03.19ರವರೆಗೆ ಸರ್ಕಾರಿ ರಜಾ ದಿನಗಳನ್ನ ಹೊರತುಪಡಿಸಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬಹುದು.
ಇನ್ನುಅಧಿಸೂಚನೆ ಹೊರಡಿಸುವ ದಿನಾಂಕ ಮಾ. 19 ಆಗಿದ್ದು, ನಾಮ ನಿರ್ದೇಶನ ಪತ್ರ ಸಲ್ಲಿಸಲು ಕೊನೆಯ ದಿನಾಂಕ ಮಾ. 23 ಆಗಿದೆ. ನಾಮ ನಿರ್ದೇಶನ ಪತ್ರಗಳ ಪರಿಶೀಲನಾ ದಿನಾಂಕ ಮಾ. 27, ಉಮೇದುವಾರಿಕೆ ಹಿಂತೆದುಕೊಳ್ಳುವ ದಿನಾಂಕ ಮಾ. 29 ಆಗಿದೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ 412 ನಾನ್ ಬೇಲಬಲ್ ವಾರೆಂಟ್ಸ್ ನೀಡಲಾಗಿದೆ. 13 ಪ್ರಕರಣಗಳು ದಾಖಲಾಗಿದ್ದು, 11 ಪ್ರಕರಣಗಳು ಮುಕ್ತಾಯಗೊಂಡಿವೆ. 2 ಪ್ರಕರಣ ವಿಚಾರಣೆಯಲ್ಲಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಒಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಅಬ್ಬರದ ಭಾಷಣ, ಪ್ರಚಾರದ ಭರಾಟೆ ಶುರುವಾಗಲಿದ್ದು, ಮತದಾರರ ಮನ ಸೆಳೆಯಲು ರಾಜಕೀಯ ಪಕ್ಷಗಳು ಕಾರ್ಯತಂತ್ರ ಹೆಣೆಯುತ್ತಿವೆ.