ಚಾಮರಾಜನಗರ: ಹೋದ್ಯಾ ಪಿಶಾಚಿ ಎಂದರೆ ಬಂದ ಗವಾಕ್ಷಿ ಎಂಬಂತೆ ಹೆಳವರ ಹುಂಡಿ ಮದುವೆ ಪ್ರಕರಣದಿಂದ ನಿರಾಳರಾಗಿದ್ದ ಗಡಿಜಿಲ್ಲೆ ಜನತೆ ಈಗ ಮತ್ತೆ ಆತಂಕಕ್ಕೆ ಒಳಗಾಗುವಂತಾಗಿದೆ.
ಹೌದು, ಮಳವಳ್ಳಿಯ ಕೊರೊನಾ ಸೋಂಕಿತ ಸರ್ಕಾರಿ ಅಧಿಕಾರಿಯ ಮದುವೆಗೆ ಬಂದು ಊಟ ಮಾಡಿ ತೆರಳಿದ್ದ ಎಂಬುದು ಫೋಟೋ ಮೂಲಕ ಖಾತ್ರಿಯಾಗುತ್ತಿದ್ದಂತೆ ನಗರದ ಸೋಮವಾರಪೇಟೆಯ ಇಬ್ಬರನ್ನು ಆರೋಗ್ಯ ಇಲಾಖೆ ಕ್ವಾರೆಂಟೈನ್ ಮಾಡಿದೆ.
ಕಳೆದ ಬುಧವಾರ ನಂಜನಗೂಡು ತಾಲೂಕಿನ ಹೆಳವರಹುಂಡಿಯಲ್ಲಿ ಸೋಮವಾರಪೇಟೆ ವಧುವಿನೊಂದಿಗೆ ವಿವಾಹ ನಡೆದಿತ್ತು. ಮಳವಳ್ಳಿಯ ಕೊರೊನಾ ಸೋಂಕಿತ ಮದುವೆಗೆ ಬಂದಿದ್ದ ಎನ್ನಲಾಗಿತ್ತು. ಬಳಿಕ ಇಲ್ಲಾ ಎಂದು ಚಾಮರಾಜನಗರ ಡಿಸಿ ಸ್ಪಷ್ಟಪಡಿಸಿದ್ದರು. ಆದರೆ, ಸೋಂಕಿತ ಬಂದು ಊಟ ಮಾಡುತ್ತಿರುವ ಫೋಟೋವನ್ನು ವಧುವಿನ ಮನೆಯವರು ಆರೋಗ್ಯ ಇಲಾಖೆಗೆ ನೀಡಿದ ಬಳಿಕ ಆತ ಭಾಗಿಯಾಗಿರುವುದು ಖಾತ್ರಿಯಾಗಿದೆ. ಜೊತೆಗೆ, ಕೊರೊನಾತಂಕ ಮತ್ತೆ ಹಸಿರುವಲಯದಲ್ಲಿ ಆರಂಭವಾಗಿದೆ.