ಚಾಮರಾಜನಗರ: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ತ್ರೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸನಾತನ ಧರ್ಮದ ವಿರುದ್ಧ ಹೇಳಿಕೆ ಕೊಟ್ಟು ವಿವಾದವನ್ನು ಮೈ ಮೇಲೆ ಎಳೆದುಕೊಂಡಿರುವ ಸಚಿವರ ವಿರುದ್ಧ ನಟ ಪ್ರಥಮ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹನೂರಿನಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ನಟ ಪ್ರಥಮ್, ''ಏನು ಹೇಳಿದ್ರೂ ಸರಿ ಅನ್ನೋ ಮನೋಭಾವ ಒಳ್ಳೆಯದಲ್ಲ, ತಪ್ಪು ತಿದ್ದುಕೊಳ್ಳಲು ಬಹಳಷ್ಟು ವೇದಿಕೆಗಳಿದ್ದರೂ ತಾನು ಮಾತನಾಡಿದ್ದೇ ಸರಿ ಎಂದು ಹೇಳಿಕೊಳ್ಳುವುದನ್ನು ಬಿಡಬೇಕು'' ಎಂದು ವಾಗ್ದಾಳಿ ನಡೆಸಿದರು.
ಜನರ ಭಾವನೆಗಳಿಗೆ ನೋವಾಗಿದೆ.... ಉಡಾಫೆ ಹೇಳಿಕೆಗಳಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗುತ್ತದೆ ಅನ್ನೋ ಪರಿಕಲ್ಪನೆ ಇರಬೇಕು. ಅವರ ಹೇಳಿಕೆಯಿಂದ ಎಷ್ಟೋ ಜನರ ಭಾವನೆಗಳಿಗೆ ನೋವಾಗಿದೆ. ಇಷ್ಟ ಇಲ್ಲದಿದ್ದರೆ ಧರ್ಮವನ್ನು ಪೂಜಿಸುವುದು ಬೇಡ. ಯಾರೇ ಆಗಲಿ ತಮ್ಮ ತಮ್ಮ ಧರ್ಮವನ್ನು ಗೌರವಿಸಬೇಕು. ಈ ರೀತಿ ಮಾತಾಡೋದು ತಪ್ಪು. ಸಚಿವ ಉದಯನಿಧಿ ಸ್ಟಾಲಿನ್ ಅವರು ತಪ್ಪಾಗಿ ಮಾತಾಡಿದ ಬಳಿಕ ಕ್ಷಮೆ ಕೇಳುತ್ತಾರೆ ಅಂದುಕೊಂಡಿದ್ದೆ. ಆದರೆ, ಮತ್ತೆ ಅದನ್ನೇ ಮುಂದುವರಿಸಿದ್ದಾರೆ. ಹೀಗಾಗಿ ಅಂತವರ ಬಗ್ಗೆ ಮಾತಾಡೋದನ್ನೇ ಬಿಡಬೇಕು ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ನವೆಂಬರ್ನಲ್ಲಿ ಪ್ರಥಮ್ ಮದುವೆ: ನವೆಂಬರ್ 23-24ರ ಸಂದರ್ಭ ವಿವಾಹ ಸಮಾರಂಭ ಇಟ್ಟುಕೊಳ್ಳಬೇಕು ಎಂದು ಹಿರಿಯರು ನಿಶ್ಚಯಿಸಿದ್ದಾರೆ. ತೋರ್ಪಡಿಕೆಗಾಗಿ 50 ಸಾವಿರ ಜನರನ್ನು ಕರೆಯದೇ ಸಣ್ಣ ಸಮಾರಂಭದಲ್ಲಿ ಹಸೆಮಣೆ ಏರುತ್ತೇನೆ. ಅದ್ಧೂರಿತನಕ್ಕಿಂತ ಹೇಗೆ ಅರ್ಥಪೂರ್ಣವಾಗಿ ಜೀವನ ನಡೆಸುತ್ತೇವೆ ಎನ್ನುವುದು ಮುಖ್ಯ ಎಂದು ತಿಳಿಸಿದರು.
ನ. 4ಕ್ಕೆ ಕರ್ನಾಟಕದ ಅಳಿಯ ಚಿತ್ರ ತೆರೆಗೆ: ನವೆಂಬರ್ 4 ರಂದು ಕರ್ನಾಟಕದ ಅಳಿಯ ಸಿನಿಮಾ ಬಿಡುಗಡೆ ಆಗಲಿದೆ. ಅಪ್ಪು ಕೊನೆಯ ಬಾರಿ ಮೆಚ್ಚಿದ ಚಿತ್ರ ಇದಾಗಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಗೆಟಪ್ ಅನ್ನು ತೀರಾ ಮೆಚ್ಚಿಕೊಂಡಿದ್ದರು, ಅದು ನನಗೆ ಹೆಮ್ಮೆ ಇದೆ. ಕೊಳ್ಳೇಗಾಲ, ಹನೂರು ಭಾಗದ ಭಾಷೆಯಲ್ಲಿ ಚಿತ್ರ ಮೂಡಿಬಂದಿದ್ದು ವಾಮಾಚಾರ, ಕಾಮಿಡಿ ಎಲ್ಲವೂ ಈ ಚಿತ್ರದಲ್ಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: 'ಎಲ್ಲಿ ಬೇಕಾದರೂ ಅದನ್ನೇ ಹೇಳುವೆ'.. ಸನಾತನ ಧರ್ಮ ವಿವಾದಿತ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ಉದಯನಿಧಿ ಸ್ಟಾಲಿನ್
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪುತ್ರರೂ ಆಗಿರುವ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವು ಡೆಂಘೀ ಮತ್ತು ಮಲೇರಿಯಾ ಇದ್ದಂತೆ. ಸನಾತನ ಧರ್ಮವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂಬ ಹೇಳಿಕೆ ಕೊಟ್ಟಿದ್ದರು. ಈ ಬಗ್ಗೆ ದೇಶಾದ್ಯಂತ ಟೀಕೆ ವ್ಯಕ್ತವಾಗುತ್ತಿದೆ. ಅದಾಗ್ಯೂ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ಅವರು ಮತ್ತೆ ಇದೇ ಹೇಳಿಕೆ ಕೊಡಲು ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ಭಾರತ್ ಮಾತಾ ಕಿ ಜೈ': ಇಂಡಿಯಾ vs ಭಾರತ್ ಚರ್ಚೆ ನಡುವೆ ಅಮಿತಾಭ್ ಬಚ್ಚನ್ ಟ್ವೀಟ್!