ಚಾಮರಾಜನಗರ: ಕೊರೊನಾ ಮಹಾಮಾರಿ ಹಲವರ ಬದುಕು ಕಿತ್ತುಕೊಂಡಿರುವುದು ಎಷ್ಟು ಸತ್ಯವೋ ಅದೇ ರೀತಿ ಹಲವರಿಗೆ ಬದುಕಲು ಛಲ ತಂದುಕೊಟ್ಟಿರುವುದು ಅಷ್ಟೇ ಸತ್ಯ. ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡು ದಿಕ್ಕೇ ತೋಚದಿದ್ದ ವೇಳೆ ಕರ್ಪೂರ ತಯಾರಿಕೆ ಇಲ್ಲೊಬ್ಬರ ಕೈಹಿಡಿದಿದೆ.
ಕೊಳ್ಳೇಗಾಲ ತಾಲೂಕಿನ ಸರಗೂರು ಗ್ರಾಮದ ಉಮೇಶ್ ಆರಾಧ್ಯ ಎಂಬುವರು ಬೆಂಗಳೂರಿನ ಅಗರಬತ್ತಿ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಕರ್ಪೂರ ತಯಾರಿಕೆ ಕಲಿಯುತ್ತಿದ್ದರು. ಆದರೆ ಕೊರೊನಾದಿಂದ ನೌಕರಿ ಕಳೆದುಕೊಂಡ ಉಮೇಶ್ಗೆ ಬೆಳಕಾಗಿದ್ದು ಕರ್ಪೂರ ತಯಾರಿಕೆ.
ಇತ್ತ ನೌಕರಿ ಇಲ್ಲದೇ ಕಂಗೆಟ್ಟಿದ್ದ ಉಮೇಶ್, ಸಂಪೂರ್ಣವಾಗಿ ಕರ್ಪೂರ ತಯಾರಿಕೆಯಲ್ಲಿ ತೊಡಗಿಕೊಂಡು ಪತ್ನಿಗೂ ಕರ್ಪೂರ ತಯಾರಿಕೆಯ ನೈಪುಣ್ಯತೆ ಕಲಿಸಿದರು. ಇದಕ್ಕೆ ಉಮೇಶ್ ತಾಯಿ ಪಾರ್ವತಮ್ಮ ಕೂಡ ಜೊತೆಯಾಗಿ ಇಡೀ ಕುಟುಂಬ ಕರ್ಪೂರ ತಯಾರಿಕೆಯ ಸ್ವಾವಲಂಬಿ ಜೀವನಕ್ಕೆ ಅಡಿಯಿಟ್ಟು 9 ತಿಂಗಳ ಅವಧಿಯಲ್ಲಿ ಲಾಭದಾಯಕ ಕಸುಬನ್ನಾಗಿಸಿಕೊಂಡಿದ್ದಾರೆ.
ಈ ನಡುವೆ ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯಡಿ ಬ್ಯಾಂಕಿನಿಂದ 2 ಲಕ್ಷ ರೂ. ಸಾಲ ಪಡೆದು ಕರ್ಪೂರ ತಯಾರಿಸುವ ಯಂತ್ರವನ್ನು ಇತ್ತೀಚೆಗೆ ಖರೀದಿಸಿ ಮಂಜುನಾಥ ಕರ್ಪೂರ ಎಂಬ ಬ್ರಾಂಡಿನಡಿ ಮಾರಾಟ ಮಾಡುತ್ತಿದ್ದಾರೆ.
ಬೆಂಗಳೂರಿನಿಂದ ಕರ್ಪೂರ ತಯಾರಿಸಲು ಬೇಕಾಗುವ ಸಾಮಾಗ್ರಿಗಳನ್ನು ಖರೀದಿಸುವ ಉಮೇಶ್, ಯಂತ್ರದ ಸಹಾಯದಿಂದ ವಿವಿಧ ಕಲಾಕೃತಿಯ ಕರ್ಪೂರಗಳನ್ನು ತಯಾರಿಸಿ, ಅದನ್ನು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ಯಾಕ್ ಮಾಡುವುದರ ಜೊತೆಗೆ ತಾವೇ ಮಾರ್ಕೆಟಿಂಗ್ ಮಾಡುತ್ತಿದ್ದಾರೆ.
ಚಂದ್ರಮ್ಮ ಹಾಗೂ ಮಹಾಲಕ್ಷ್ಮಿ ಎಂಬ ಇಬ್ಬರು ಮಹಿಳೆಯರಿಗೂ ಕೆಲಸ ಕೊಟ್ಟಿರುವ ಉಮೇಶ್, ಭವಿಷ್ಯದಲ್ಲಿ ಧೂಪ, ಗಂಧದಕಡ್ಡಿ ತಯಾರಿಸುವ ಹಂಬಲ ಹೊಂದಿದ್ದಾರೆ. 5 ದಿನಕ್ಕೆ 30 ಕೆಜಿಯಷ್ಟು ಕರ್ಪೂರ ತಯಾರಿಸಲಿದ್ದು, ದಿನದಿಂದ ದಿನಕ್ಕೆ ಕರ್ಪೂರದ ಬೇಡಿಕೆ ಹೆಚ್ಚಾಗುತ್ತಿದೆಯಂತೆ.
ಇದನ್ನೂ ಓದಿ: ತಾಳವಾಡಿ ಕರ್ನಾಟಕ ಸೇರ್ಪಡೆಗೆ ಒತ್ತಾಯ; ಚಾಮರಾಜನಗರಕ್ಕೆ ವಾಟಾಳ್ ರ‍್ಯಾಲಿ