ಚಾಮರಾಜನಗರ : ತಾಲೂಕಿನ ಸಾಗಡೆ ಗ್ರಾಮದ ಬೆಳ್ಳಶೆಟ್ಟಿ-ಸಿದ್ದಮ್ಮ ದಂಪತಿಯ 7 ತಿಂಗಳ ಮಗು ಮನೋಜ್‌ಕುಮಾರ್ ಇಂದು ಕೊರೊನಾ ಮುಕ್ತವಾಗಿ ಕೋವಿಡ್ ಕೇರ್ ಸೆಂಟರ್‌ನಿಂದ ಬಿಡುಗಡೆಯಾಗುವ ಮೂಲಕ ಹಲವರಿಗೆ ಆತ್ಮಸ್ಥೈರ್ಯ ನೀಡಿದೆ.
ಸಿದ್ದಮ್ಮ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿಗೆ ವಿವಾಹವಾಗಿದ್ದರು. ಕಳೆದ ಜನವರಿ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಬಾಣಂತನಕ್ಕೆಂದು ಸಾಗಡೆಯ ತವರು ಮನೆಗೆ ಬಂದಿದ್ದರು. ಆದರೆ, 15 ದಿನಗಳ ಹಿಂದೆ ಮಗುವಿಗೆ ಕಪಾಲಗುರುವಾಗಿತ್ತು. ಜೊತೆಗೆ, ಜ್ವರವು ಬಂದು 2-3 ದಿನ ನಿದ್ರೆ ಮಾಡದೇ ಅಳುತ್ತಿದ್ದರಿಂದ ಕಬ್ಬಹಳ್ಳಿ ಆಸ್ಪತ್ರೆಗೆ ತೋರಿಸಿ, ಗಂಟಲು ದ್ರವವನ್ನು ನೀಡಿ ಬಂದಿದ್ದರು. ಎರಡು ದಿನಗಳ ಬಳಿಕ ಮಗುವಿನ ಕೋವಿಡ್ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿತು ಎಂದು ಸಿದ್ದಮ್ಮರ ಬಾವ ಮಹದೇವಶೆಟ್ಟಿ ದೂರವಾಣಿ ಮೂಲಕ ಮಾಹಿತಿ ಹಂಚಿಕೊಂಡರು.
ಮಗುವಿಗೆ ಕೊರೊನಾ ಬಂದಿದೆ ಎಂದು ನರ್ಸ್ಗಳು ನಮ್ಮ ಮನೆ ಹುಡುಕಾಡುತ್ತಿದ್ದಾರೆ ಎಂದು ತಿಳಿದು ಆತಂಕವಾಯಿತು. ನಾನು ಮಾತ್ರ ಮಗುವಿನೊಂದಿಗೆ ತೆರಳಲು ಅವಕಾಶ ಇದ್ದಿದ್ದರಿಂದ ಇನ್ನು ಹೆಚ್ಚು ಆತಂಕಗೊಂಡೆ. ಮೊದಲ 4 ದಿನ ಕೋವಿಡ್ ಆಸ್ಪತ್ರೆಯಲ್ಲಿ ಬಳಿಕ 3 ದಿನ ಕೋವಿಡ್ ಕೇರ್ ಸೆಂಟರ್ನಲ್ಲಿ ಪ್ರತ್ಯೇಕವಾಗಿ ಇರಿಸಿದ್ದರು. ಮಾತ್ರೆ, ಚುಚ್ಚುಮದ್ದು ಅಂತಹದ್ದೇನು ಕೊಡಲಿಲ್ಲ. ಎರಡು ರೀತಿಯ ಸಿರಪ್ಗಳನ್ನು ನೀಡಿದ್ದರಷ್ಟೇ ಎಂದು ಮನೋಜ್ ತಾಯಿ ಸಿದ್ದಮ್ಮ ತಮ್ಮ ಅನುಭವ ಹಂಚಿಕೊಂಡರು.
ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ನಲ್ಲಿ ನರ್ಸ್ಗಳು, ವೈದ್ಯರು ಚೆನ್ನಾಗಿ ಉಪಚರಿಸಿದರು. ಊಟ-ತಿಂಡಿ ವಿಚಾರದಲ್ಲಂತೂ ಮನೆಯವರಂತೆ ಕಂಡರು. ಈವರೆಗೂ ಮಗುವಿಗೆ ಹೇಗೆ ಕೊರೊನಾ ಬಂದಿತೆಂದು ಗೊತ್ತಾಗಲಿಲ್ಲ. ಆದರೂ ದೇವರ ದಯೆಯಿಂದ ಆರೋಗ್ಯವಾಗಿ ವಾಪಾಸ್ಸಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.