ಚಾಮರಾಜನಗರ: ಜಿಲ್ಲೆಯ 30 ಪೊಲೀಸ್ ಸಿಬ್ಬಂದಿಗೆ ಕೊರೊನಾ ತಗುಲಿದ್ದು, ಕ್ವಾರಂಟೈನ್ನಲ್ಲಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಮಾಹಿತಿ ನೀಡಿದ್ದಾರೆ. ಕೊರೊನಾ ಕರ್ಫ್ಯೂ ಪರಿಶೀಲನೆಗೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ಫ್ಯೂಗೆ ಮೊದಲೆರಡು ದಿನ ಜನರು ಸಹಕಾರ ನೀಡಿದ್ದರು. ಈಗ ಅವರಲ್ಲಿ ಗಂಭೀರತೆ ಹೋಗುತ್ತಿದೆ. ನಮ್ಮಲ್ಲೂ 30 ಮಂದಿ ಸೋಂಕಿತರು ಸೇರಿದಂತೆ ಪ್ರಾಥಮಿಕ ಸಂಪರ್ಕಿತರು ಕೂಡ ಕ್ವಾರಂಟೈನ್ನಲ್ಲಿದ್ದು, ಸಿಬ್ಬಂದಿ ಕೊರತೆ ಎದುರಾಗಿದೆ ಎಂದಿದ್ದಾರೆ.
ಈಗ ಹೆಚ್ಚಿನ ಹೋಂ ಗಾರ್ಡ್ಸ್ಗಳ ಅವಶ್ಯಕತೆ ಇದ್ದು ಡಿಸಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ. ಜಿಲ್ಲೆಯಲ್ಲಿ 22 ಅಂತಾರಾಜ್ಯ ಹಾಗೂ ಅಂತರ ತಾಲೂಕು ಚೆಕ್ ಪೋಸ್ಟ್ಗಳಿದ್ದು, ಎಲ್ಲಾ ಕಡೆಯೂ ಪೊಲೀಸರಿದ್ದಾರೆ. ಕಂದಾಯ ಇಲಾಖೆ ಮತ್ತು ವೈದ್ಯಕೀಯ ಸಿಬ್ಬಂದಿ ಅಗತ್ಯವಿದೆ ಎಂದು ಅವರು ಮಾಹಿತಿ ನೀಡಿದರು.
80 ಎಫ್ಐಆರ್ ದಾಖಲು
ಇನ್ನು, ಕಳೆದ 3 ದಿನಗಳಿಂದ ಅನಗತ್ಯವಾಗಿ ಸಂಚರಿಸುತ್ತಿದ್ದವರು ಮತ್ತು ಕೊರೊನಾ ನಿಯಮ ಉಲ್ಲಂಘಿಸಿದವರ ವಿರುದ್ಧ ಒಟ್ಟು 80 ಎಫ್ಐಆರ್ ದಾಖಲಿಸಲಾಗಿದೆ. ವಾಹನಗಳನ್ನು ಜಪ್ತಿ ಮಾಡಿ ದಂಡ ಹಾಕುತ್ತಿದ್ದೇವೆ. ಸಾರ್ವಜನಿಕರು ತುರ್ತು ಪರಿಸ್ಥಿತಿಯನ್ನು ಅರಿತು ಅನಗತ್ಯ ಸಂಚಾರ ಮಾಡಬಾರದು. ಗಂಭೀರತೆ ಅರಿಯದಿದ್ದರೆ ಕರ್ಫ್ಯೂ ಮುಂದುವರೆಯುತ್ತಲೇ ಇರುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ನಾಪತ್ತೆ ಆಗಿರುವ 3 ಸಾವಿರ ಸೋಂಕಿತರನ್ನು ಪತ್ತೆ ಹಚ್ಚಲು ಮುಂದಾದ ಪೊಲೀಸರು