ಚಾಮರಾಜನಗರ: ಕೊರೊನಾ ಎರಡನೇ ಅಲೆಯಲ್ಲಿ ಚಾಮರಾಜನಗರ ನಲುಗುತ್ತಿದ್ದು ದಿನದಿಂದ ದಿನಕ್ಕೆ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಆದರೆ, ಕೋವಿಡ್ ಕರ್ತವ್ಯದಲ್ಲಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುವ ಬದಲು ನಿರ್ಲಕ್ಷ್ಯ ತೋರಿದವರಿಗೆ ಚಾಮರಾಜನಗರ ಡಿಸಿ ಬಿಸಿ ಮುಟ್ಟಿಸಿದ್ದಾರೆ.
ಕೋವಿಡ್ ಸಂಬಂಧಿ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿದ 22 ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಕೋವಿಡ್ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳನ್ನು ನಿಗದಿತ ಅವಧಿಯಲ್ಲಿ ಪತ್ತೆ ಹಚ್ಚುವ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಲಾಗಿತ್ತು. ಆದರೆ, ಈ ಕಾರ್ಯದಲ್ಲಿ ಶೂನ್ಯ ಪ್ರಗತಿಯಲ್ಲಿರುವ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ವಿವರವನ್ನು ಕಾಂಟಾಕ್ಟ್ ಟ್ರೇಸಿಂಗ್ ತಂಡದ ನೋಡಲ್ ಅಧಿಕಾರಿಗಳು ವರದಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿದ 22 ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, ನೋಟಿಸ್ ತಲುಪಿದ 24 ಗಂಟೆಯಲ್ಲಿ ವಿವರಣೆಯನ್ನು ಸಲ್ಲಿಸಬೇಕು. ತಪ್ಪಿದಲ್ಲಿ ಸಮಜಾಯಿಷಿ ಏನು ಇರುವುದಿಲ್ಲವೆಂದು ಪರಿಗಣಿಸಿ ಶಿಸ್ತಿನ ಕ್ರಮಕೈಗೊಳ್ಳಲು ನಿಯಮಾನುಸಾರ ಕ್ರಮವಹಿಸಲಾಗುವುದೆಂದು ಡಿಸಿ ಎಚ್ಚರಿಸಿದ್ದಾರೆ.