ಚಾಮರಾಜನಗರ: ಕೊರೊನಾ ಕೇಸ್ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಅನ್ಲಾಕ್ 1.0 ಜಾರಿಯಾಗುತ್ತಿದ್ದು, ಎರಡು ತಿಂಗಳ ಬಳಿಕ KSRTC ಕಾರ್ಯಾಚರಣೆ ನಡೆಸಲಿದೆ. ಈ ಕುರಿತು, KSRTC ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ಜಿಲ್ಲೆಯ ಹೋಬಳಿ ಹಾಗೂ ತಾಲೂಕು ಕೇಂದ್ರಗಳಿಗಷ್ಟೇ ಬಸ್ ಸಂಚಾರ ಮಾಡಲಿದ್ದು ಗ್ರಾಮಾಂತರ ವಿಭಾಗಕ್ಕೆ ಬಸ್ ಸೇವೆ ಇರುವುದಿಲ್ಲ. ಇದರೊಟ್ಟಿಗೆ, ಚಾಮರಾಜನಗರದಿಂದ ಬೆಂಗಳೂರಿಗೆ ಮಾತ್ರ ನಮ್ಮ ವಿಭಾಗದಿಂದ ಬಸ್ ಹೊರಡಲಿದ್ದು, ಮೈಸೂರಿಗೆ ಸದ್ಯಕ್ಕೆ ಟ್ರಿಪ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಓದಿ: ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 2.58ಕ್ಕೆ ಇಳಿಕೆ.. ಕೊರೊನಾಗೆ 120 ಜನರು ಬಲಿ
ಬೆಂಗಳೂರಿಗೆ ಗಂಟೆಗೆ ಒಂದರಂತೆ ಬಸ್ ಸೇವೆ ನೀಡಬೇಕೆಂದುಕೊಂಡಿದ್ದು, ಬೇಡಿಕೆಗನುಣವಾಗಿ ಸೇವೆ ಇರಲಿದೆ. ಜಿಲ್ಲೆಯ ಒಳಗಡೆ 50 ಬಸ್ ಓಡಿಸಲು ತೀರ್ಮಾನಿಸಲಾಗಿದೆ. ಒಟ್ಟು 1800 ಸಂಸ್ಥೆಯ ಸಿಬ್ಬಂದಿ ಲಸಿಕೆಯ ಮೊದಲ ಡೋಸ್ ಪಡೆದಿದ್ದು, 140 ಮಂದಿ ಎರಡೂ ಡೋಸ್ ಪಡೆದಿದ್ದಾರೆ. ಚಾಲಕರು, ನಿರ್ವಾಹಕರ ಕೊರತೆ ಎದುರಾದರೆ ಮೊದಲ ಡೋಸ್ ಪಡೆದಿರುವ 45 ವರ್ಷದೊಳಗಿನವರನ್ನು ಬಳಸಿಕೊಳ್ಳಲಾಗುವುದು. ಸೇವೆಗೂ ಮೊದಲು, RTPCR ನೆಗೆಟಿವ್ ವರದಿ ಕಡ್ಡಾಯವಾಗಿರಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಅನ್ಲಾಕ್ ಒಂದರ ಮಾರ್ಗಸೂಚಿಯು ಸೋಮವಾರದಿಂದ ಜಾರಿಗೆ ಬರಲಿದೆ ಎಂದು ಚಾಮರಾಜನಗರ ಡಿಸಿ ಅದೇಶ ಹೊರಡಿಸಿದ್ದಾರೆ. ಅದರಂತೆ, ದಿನಸಿ, ಮಾಂಸದಂಗಡಿ, ಬೀದಿಬದಿ ವ್ಯಾಪಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ತೆರೆಯಲು ಅವಕಾಶವಿದ್ದು, ಮದ್ಯದಂಗಡಿಯ ಸಮಯವೂ ವಿಸ್ತರಣೆಯಾಗಿದೆ. ಜೊತೆಗೆ, ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಇರಲಿದೆ.