ಬೆಂಗಳೂರು: ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಅಲಿಕಲ್ಲು ಮಳೆ ದ್ರಾಕ್ಷಿ ಬೆಳೆಗಾರರ ನಿದ್ದೆಗೆಡಿಸಿದೆ.
ಹೌದು, ಬಿಸಿಲಿನ ಝಳಕ್ಕೆ ಬರಗಾಲದ ನಡುವೆಯೂ ದ್ರಾಕ್ಷಿ ಬೆಳೆಗಾರರು ಹಗಲು ರಾತ್ರಿ ಎನ್ನದೆ ದುಡಿದು ಉತ್ತಮ ಬೆಳೆ ಬೆಳೆದಿದ್ದರು. ಆದ್ರೆ ಎರಡು ಮೂರು ಗಂಟೆ ಬಿದ್ದ ಮಳೆ ಬೆಳೆಗಾರರ ಜೀವನದಲ್ಲಿ ಬರ ಸಿಡಿಲು ಬಡಿದಂತಾಗಿದೆ.
ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಅಲಿಕಲ್ಲು ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಸುತ್ತಮುತ್ತಲಿನ ರೈತರು ಬೆಳೆದ ದ್ರಾಕ್ಷಿ, ಮಾವು, ಹಲಸು ಬೆಳೆ ನಾಶವಾಗಿದೆ. ಈ ಭಾಗದ ಪ್ರಮುಖ ಬೆಳೆಯಾದ ದ್ರಾಕ್ಷಿ ಸಂಪೂರ್ಣ ನೆಲ ಕಚ್ಚಿದೆ. 15 ವರ್ಷಗಳ ಬಳಿಕ ಅಲಿಕಲ್ಲು ಮಳೆ ಬಿದ್ದಿದ್ದು ರೈತರ ಬಾಳಿನಲ್ಲಿ ನೋವು ತಂದೊಡ್ಡಿದೆ.
ಸುಮಾರು ನಾಲ್ಕೈದು ವರ್ಷಗಳ ನಂತರ ದ್ರಾಕ್ಷಿ ಬೆಳೆಗೆ ಅಧಿಕ ಬೆಲೆ ಬಂದಿತ್ತು. ಒಂದು ಕೆ.ಜಿ ಗೆ 50 ರಿಂದ 60 ರೂ. ಮಾರುಕಟ್ಟೆಯಲ್ಲಿ ಬೆಲೆ ಬಂದಿತ್ತು. ಆದೇ ರೀತಿ ಬೆಲೆಗೆ ಅನುಗುಣವಾಗಿ ಬೆಳೆಯೂ ಸಹ ಬಹಳ ಉತ್ತಮವಾಗಿತ್ತು. ಆದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತಿನಂತೆ ಅನೇಕ ರೈತರು ಬೆಳೆದ ಕೋಟ್ಯಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ಬರಗಾಲದಲ್ಲಿ ಪಟ್ಟ ಪರಿಶ್ರಮಕ್ಕೆ ಇದೀಗ ಪ್ರತಿಫಲವಿಲ್ಲದಂತಾಗಿದೆ.
ಇನ್ನು ದ್ರಾಕ್ಷಿ ಬೆಳೆದ ರೈತರ ತೋಟಗಳಿಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.