ಬೆಂಗಳೂರು: ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಸಂಸದರೂ ಕೂಡ ಆಗಿರುವ ಡಾ.ಎಂ. ವೀರಪ್ಪ ಮೊಯ್ಲಿ, ಮತ್ತೆ ರಾಜ್ಯ ಹೈಕೋರ್ಟ್ ವಕೀಲರಾಗಿ ಕರಿ ಕೋಟು ಧರಿಸಿದ್ದಾರೆ. ಈ ಕುರಿತು ಈಟಿವಿ ಭಾರತ್ ಜೊತೆ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.
ಚುನಾವಣೆ ಆಗೋಯ್ತು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಾಗೂ ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಜನರ ಸೇವೆಗೆ ನನ್ನನ್ನ ನಾನು ತೊಡಗಿಸಿಕೊಳ್ಳಬೇಕು. ಇನ್ನೂ ಸಾಕಷ್ಟು ಸಮಯ ಇದೆ. ಸಾಹಿತ್ಯ ಕ್ಷೇತ್ರ, ವಕೀಲ ವೃತ್ತಿ ಹಾಗೂ ಸಾಮಾಜಿಕ ಸೇವೆಯಲ್ಲಿ ನಿರತನಾಗಬೇಕು ಅಂದುಕೊಂಡಿದ್ದೇನೆ. ಚಿಕ್ಕಬಳ್ಳಾಪುರ ಜನ ಪ್ರೀತಿಯಿಂದ ಎರಡು ಬಾರಿ ಆಯ್ಕೆ ಮಾಡಿದ್ರು, ಆದ್ರೆ ಮೊರನೇ ಬಾರಿ ಮೈತ್ರಿ ಸರ್ಕಾರ ವರ್ಕೌಟ್ ಆಗಿಲ್ಲ. ಇದನ್ನೇ ಉಪಯೋಗಿಸಿಕೊಂಡ ನರೆಂದ್ರ ಮೋದಿ ಜನರ ಮನಸ್ಸು ಸೆಳೆದು ಚುನಾವಣೆಗೆ ಬೇಕಾದ ತಂತ್ರಗಳನ್ನು ಬಳಸಿದ್ರು, ಹೀಗಾಗಿ ಸೋಲು ಕಾಣಬೇಕಾಯ್ತು. ಜೆಡಿಎಸ್-ಕಾಂಗ್ರೆಸ್ ಪಕ್ಷವನ್ನ ನಾನು ದೂರಲ್ಲ, ಚುನಾವಣೆ ಬಂದಾಗ ಮಾತ್ರ ಹೊಂದಾಣಿಕೆ ಆಗೋದಲ್ಲ, ತಳಮಟ್ಟದಲ್ಲಿ ಮೊದಲು ಹೊಂದಾಣಿಕೆಯಾಗಬೇಕು ಎಂದರು.
ವಕೀಲ ವೃತ್ತಿ ಅಂದ್ರೆ ನನಗೆ ವಿಶೇಷ ಪ್ರೀತಿ:
ಇನ್ನು ತಮ್ಮ ವಕೀಲ ವೃತ್ತಿ ಬಗ್ಗೆ ಮಾತನಾಡಿ, ಜನರ ಸೇವೆಯಲ್ಲಿ ನಿರತನಾಗಲು ಮುಂದಾಗಿದ್ದೇನೆ. ಅದರ ಜೊತೆಗೆ ವಕೀಲ ವೃತ್ತಿ ಅಂದ್ರೆ ನನಗೆ ವಿಶೇಷ ಪ್ರೀತಿ. ಬಾಲ್ಯದಿಂದ ಬಡವರ ಪರವಾಗಿ ಹೋರಾಟ ಮಾಡಿ ನ್ಯಾಯ ದೊರಕಿಸಬೇಕೆಂಬ ಆಸೆಯಿತ್ತು, ಹೀಗಾಗಿ ವಕೀಲ ವೃತ್ತಿ ಆಯ್ಕೆ ಮಾಡಿಕೊಂಡಿದ್ದೆ. ವೃತ್ತಿಯನ್ನ ಮೊದಲು ಕಾರ್ಕಳ, ಮಂಗಳೂರು, ಉಡುಪಿಯಲ್ಲಿ ಪ್ರಾರಂಭಿಸಿ, ನಂತರ ಕರ್ನಾಟಕ ಹೈಕೋರ್ಟ್ನಲ್ಲಿ ಸೇವೆ ಸಲ್ಲಿಸಿದೆ ಎಂದರು.
ನಾನು ವಕೀಲ ವೃತ್ತಿಯಲ್ಲಿರುವಾಗ ಗೇಣಿದಾರರ ಪರ ವಿಶೇಷ ಕಾಳಜಿ ವಹಿಸಿ ಹೋರಾಟ ಮಾಡ್ತಿದ್ದೆ. ಹೀಗಾಗಿ ದೇವರಾಜ್ ಅರಸ್ ನನ್ನನ್ನು ಗುರುತಿಸಿ ಕಾರ್ಕಳದಲ್ಲಿ ಚುನಾವಣೆಗೆ ನಿಲ್ಲಿಸಿ ವಿಧಾನಸಭೆಯಲ್ಲಿ ಭೂ ಮಸೂದೆ ಜಾರಿ ತರಬೇಕು, ಹೀಗಾಗಿ ನೀವು ಶಾಸಕರಾದ್ರೆ ಮಾತ್ರ ಇದು ಸಾಧ್ಯ ಅಂದಿದ್ದರು. ಆಗ ಗೇಣಿದಾರರು ಅತಂತ್ರದಲ್ಲಿದ್ದರು, ಬಡವರಿಗೆ ನ್ಯಾಯ ಸಿಗಬಹುದೆಂದು ನಾನು ಕಾರ್ಕಳದಲ್ಲಿ ಮೊದಲು ಶಾಸಕನಾದೆ. ಬಡವರ ಸೇವೆಗಾಗಿ ಮಾತ್ರ ನಾನು ಶಾಸಕನಾದೆ. ಅದು ಬಿಟ್ಟು ಯಾವುದೇ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿಂದ ಅಲ್ಲ. ಆದ್ರೆ ಬಾರ್ ಕೌನ್ಸಿಲ್ ನಿಯಮದ ಪ್ರಕಾರ ರಾಜಕಾರಣದಲ್ಲಿದ್ದು, ವಕೀಲ ವೃತ್ತಿಗೆ ಹೋಗೋ ಹಾಗಿರಲಿಲ್ಲ. ನಂತರ 2014ರಲ್ಲಿ ಪಾರ್ಲಿಮೆಂಟ್ ಸದಸ್ಯನಾಗಿದ್ದಾಗ ಸಮಯ ಸಿಕ್ಕ ಹಿನ್ನೆಲೆಯಲ್ಲಿ ಸುಪ್ರೀಂಕೋಟ್ನಲ್ಲಿ ವಕಾಲತ್ತು ವಹಿಸಲು ಹೋಗುತ್ತಿದ್ದೆ. ಸುಪ್ರೀಂಕೋರ್ಟ್ ಅಲ್ಲಿ ವಾದ ಮಾಡಿದ ಅನುಭವ ಹಾಗೂ ಗೇಣಿದಾರರ ಪರವಾಗಿ ಬಡವರಿಗೆ ನ್ಯಾಯ ಕೊಟ್ಟ ಕೇಸ್ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದರು.
ಮೊಯ್ಲಿ ಹಿನ್ನೆಲೆ:
ವಕೀಲ ವೃತ್ತಿಯ ಮೂಲಕ ಅಧಿಕೃತ ಔದ್ಯೋಗಿಕ ಬದುಕು ಆರಂಭಿಸಿದ್ದ, ವೀರಪ್ಪ ಮೊಯ್ಲಿ ಅವರು ಮುಂದಿನ ದಿನಗಳಲ್ಲಿ ಸಾಧಿಸಿದ ಸಾಧನೆ ಹಾಗೂ ಏರಿದ ಉತ್ತುಂಗ ಎಲ್ಲರಿಗೂ ಗೊತ್ತಿದೆ. 'ಶ್ರೀರಾಮಾಯಣ ಅನ್ವೇಷಣಂ' ಎಂಬ ಮಹಾಕಾವ್ಯ ರಚಿಸಿದ ಅವರು ನಾಡಿನ ಪ್ರಮುಖ ಸಾಹಿತಿಯಾಗಿಯೂ ಜನಪ್ರಿಯವಾಗಿದ್ದಾರೆ. 1968ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದರು. 1969ರಲ್ಲಿ ಕಿಸಾನ್ ಸಭಾ ಸ್ಥಾಪಿಸಿದರು. 1972 ರಿಂದ 1999ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ವಿಧಾನಸಭೆ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದರು. 1974 ರಿಂದ 77ರ ವರೆಗೆ ಡಿ. ದೇವರಾಜ್ ಅರಸು ಸಂಪುಟದಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಿಸಿದರು.
1980 - 82ರ ನಡುವೆ ಆರ್. ಗುಂಡೂರಾವ್ ಸಂಪುಟದಲ್ಲಿ ಹಣಕಾಸು ಮತ್ತು ಯೋಜನಾ ಖಾತೆ ಸಚಿವರಾಗಿದ್ದರು. 1983 - 85ರ ಅವಧಿಯಲ್ಲಿ ಪ್ರತಿಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. 1989 ರಿಂದ 1992ರ ವರೆಗೆ ವಿವಿಧ ಖಾತೆ ಸಚಿವರಾಗಿ ಕೆಲಸ ಮಾಡಿದ ಮೊಯ್ಲಿ, ರಾಜ್ಯದ 13ನೇ ಮುಖ್ಯಮಂತ್ರಿಯಾಗಿ 1992 ರಿಂದ 1994ರವರೆಗೆ ಕಾರ್ಯ ನಿರ್ವಹಿಸಿದರು. 2009 ರಿಂದ 2011ರ ವರೆಗೆ ಕೇಂದ್ರದ ಡಾ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕಾನೂನು ಸಚಿವರಾಗಿ ಹಾಗೂ 2011ರ ನಂತರ ವಾಣಿಜ್ಯ ವ್ಯವಹಾರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆದ್ದಿದ್ದ ಅವರು, 2019 ರ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡು, ಇದೀಗ ಮತ್ತೆ ವಕೀಲ ವೃತ್ತಿ ಶುರು ಮಾಡಿದ್ದಾರೆ.
ಇನ್ನು ಇದೇ ವೇಳೆ ಈಟಿವಿ ಭಾರತ್ ಒಳ್ಳೆಯ ಸುದ್ದಿಯನ್ನ ನೀಡುತ್ತಾ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ, ಇನ್ನಷ್ಟು ಉತ್ತುಂಗಕ್ಕೆ ಹೋಗಲಿ ಎಂದು ಶುಭ ಹಾರೈಸಿದರು.