ಬೆಂಗಳೂರು: ಲೋಕಸಭಾ ಚುನಾವಣೆಗೆ ಎಲ್ಲ ಪಕ್ಷಗಳು ಭರದ ಸಿದ್ಧತೆ ನಡೆಸಿವೆ. ಇದರ ಮಧ್ಯೆ ಭಾರತೀಯ ಜನತಾ ಪಕ್ಷದಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಯಾರಿಗೆ ಎನ್ನುವ ಕ್ಷಣ-ಕ್ಷಣದ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ವದಂತಿ ಕೂಡ ಉದ್ಭವವಾಗಿತ್ತು. ಇದರ ಮಧ್ಯೆ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಸಹ ಕೇಳಿ ಬಂದಿತ್ತು.
ಇದೀಗ ಇದಕ್ಕೆಲ್ಲ ಬ್ರೇಕ್ ಬಿದ್ದಿದ್ದು, ಬೆಂಗಳೂರು ದಕ್ಷಿಣದಿಂದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಕಣಕ್ಕಿಳಿಯುತ್ತಿದ್ದಾರೆ. ಪಕ್ಷದ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಬಲ ಹಿಂದುತ್ವ ಪ್ರತಿಪಾದಕ ತೇಜಸ್ವಿ ಸೂರ್ಯ ಅವರು ಈ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.
ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕ ಜೆ.ಪಿ.ನಡ್ಡಾ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿ ಹೆಸರು ಬಹಿರಂಗಗೊಳಿಸಿದ್ದು, ಇದರ ಜತೆಗೆ ಬೆಂಗಳೂರು ಗ್ರಾಮಾಂತರದಿಂದ ಅಶ್ವತ್ಥ ನಾರಾಯಣ ಕಣಕ್ಕಿಳಿಯುತ್ತಿದ್ದಾರೆ.