ಬೆಂಗಳೂರು: ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿ ತೆರವಿಗೆ ಒತ್ತಾಯಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ನೇತೃತ್ವದಲ್ಲಿ ಭೂ ಕಬಳಿಕೆ ವಿರೋಧ ಹೋರಾಟ ಸಮಿತಿ, ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ರಾಜಕಾಲುವೆ ಹಾಗೂ ಕೆರೆಗಳ ಒತ್ತುವರಿ ಮಾಡಿಕೊಂಡು ಅನಧಿಕೃತ ಕಟ್ಟಡಗಳ ನಿರ್ಮಾಣ ಮಾಡಿಕೊಂಡಿರುವ ಪರಿಣಾಮ ಮಳೆಗಾಲದಲ್ಲಿ ನಗರದ ಬಹುತೇಕ ಪ್ರದೇಶಗಳು, ರಸ್ತೆಗಳು ಜಲಾವೃತಗೊಳ್ಳುತ್ತಿವೆ. ಇದರಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ಭೂಗಳ್ಳರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಪಾಲಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ದೊರೆಸ್ವಾಮಿ, ಒತ್ತುವರಿ ಜಾಗದಲ್ಲಿದ್ದ ಬಡವರ ಮನೆ ಒಡೆದಿದ್ದಾರೆ. ಅದೇ ರಾಜಕಾಲುವೆ ಮೇಲೆಯೇ ನಿರ್ಮಿಸಿರುವ ನಟ ದರ್ಶನ್ ಮನೆ, ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರ ಒಡೆತನದ ಆಸ್ಪತ್ರೆಯನ್ನು ನೀವು ಏಕೆ ಒಡೆದು ಹಾಕಿಲ್ಲ. ಯಾಕೆ ನೀವು ಅವರ ಜೊತೆ ಶಾಮಿಲಾಗಿದ್ದೀರಾ? ನಿಮಗೆ ಆ ಕಟ್ಟಡಗಳನ್ನು ತೆರವುಗೊಳಿಸಲು ಧೈರ್ಯವಿಲ್ಲವೇ? ಎಂದು ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಕುರಿತಂತೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾತನಾಡಿ, ನೀವು ನೀಡಿರುವ ಮನವಿಗೆ ಒಂದು ವಾರದಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಕೈಗೊಂಡಿರುವ ಕ್ರಮಗಳು ಮತ್ತು ಕೆರೆಗಳ ಅಭಿವೃದ್ಧಿ ಕುರಿತ ವಿಸ್ತೃತವಾದ ಕ್ರಿಯಾ ಯೋಜನಾ ವರದಿ ನೀಡಲಾಗುವುದು. ಜೊತೆಗೆ ಪಾಲಿಕೆ ವೆಬ್ಸೈಟ್ನಲ್ಲಿ ಫೋಟೋ ಸಹಿತ ವಿವರವನ್ನು ಪ್ರಕಟಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಕೆರೆಗಳ ಒಡೆತನ ಕಂದಾಯ ಇಲಾಖೆಯದ್ದು, ಬಿಬಿಎಂಪಿಯಿಂದ ಕೆರೆಗಳ ನಿರ್ವಹಣೆ ಮಾತ್ರ ಮಾಡಲಾಗುತ್ತಿದೆ. ಅದರಂತೆ ಈಗಾಗಲೇ 74 ಕೆರೆಗಳನ್ನು ಅಭಿವೃದ್ದಿಪಡಿಸಿದ್ದು, ಒಳಚರಂಡಿಯ ಕೊಳಚೆ ನೀರು ಕೆರೆಗಳಿಗೆ ಹರಿಯದಂತೆ ಮಾಡಲಾಗಿದೆ. ಕೆರೆಗಳ ಒತ್ತುವರಿ ತೆರವಿಗೆ ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದಲ್ಲಿ 842 ಕಿ.ಮೀ ಉದ್ದದ ರಾಜಕಾಲುವೆ ಇದ್ದು, ಈಗಾಗಲೇ 349 ಕಿ.ಮೀ ಉದ್ದದ ಕಾಲುವೆಯನ್ನು ಅಭಿವೃದ್ದಿಪಡಿಸಿ, ತಡೆಗೋಡೆ ಕೂಡ ನಿರ್ಮಿಸಲಾಗಿದೆ. ಭೂ ಮಾಪಕರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ 1,950 ಕಡೆ ಒತ್ತುವರಿಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಅದನ್ನು ತೆರವುಗೊಳಿಸಲಾಗುತ್ತಿದೆ ಎಂದರು.