ಬೆಂಗಳೂರು: ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) 2018-19ನೇ ಸಾಲಿಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಶೇ 14.8ರಷ್ಟು ಹೆಚ್ಚುವರಿ ಲಾಭ ಗಳಿಸಿದೆ.
2017-18ರ ವಿತ್ತೀಯ ವರ್ಷದಲ್ಲಿ ₹ 1,989 ಕೋಟಿ ಲಾಭಾಂಶ ಗಳಿಸಿದ್ದ ಎಚ್ಎಎಲ್, ಈ ವರ್ಷದ ಆದಾಯದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಮಾರ್ಚ್ಗೆ ಕೊನೆಗೊಂಡ 2018-19ರ ಆರ್ಥಿಕ ವರ್ಷಕ್ಕೆ ₹ 2,282 ಕೋಟಿ ಗಳಿಕೆ ಮಾಡಿದ್ದು, ಶೇ 14.8ರಷ್ಟು ಲಾಭಾಂಶದಲ್ಲಿ ಏರಿಕೆ ಕಂಡಿದೆ.
2017-18ರ ಸಾಲಿನಲ್ಲಿ ₹ 18,284 ಕೋಟಿ ವಹಿವಾಟು ನಡೆಸಿದ್ದೆವು. ಮರುವರ್ಷ ₹ 19,705 ಕೋಟಿ ವಹಿವಾಟಿನ ಮುಖೇನ ವಾರ್ಷಿಕ ವಹಿವಾಟಿನಲ್ಲಿ ಶೇ 7.8ರಷ್ಟು ಬೆಳವಣಿಗೆ ದರ ಕಾಪಾಡಿಕೊಂಡಿದ್ದೇವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ತನ್ನ ಲಾಭಾಂಶದಲ್ಲಿ ಕೇಂದ್ರ ಸರ್ಕಾರ ಸೇರಿದಂತೆ ಷೇರುದಾರರಿಗೆ ₹ 662 ಕೋಟಿ ಮಧ್ಯಂತರ ಲಾಭಾಂಶವನ್ನು ಈಗಾಗಲೇ ಪಾವತಿಸಿದ್ದೇವೆ ಎಂದು ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 58 ಸಾವಿರ ಕೋಟಿಯಷ್ಟು ತಯಾರಿಕಾ ವಂತಿಗೆ ಬರಲಿದೆ ಎಂಬ ನಿರೀಕ್ಷೆ ಇದೆ. ಈ ವರ್ಷದಲ್ಲಿ ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ತೇಜಸ್ ಮತ್ತು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ಸ್ (ಎಲ್ಸಿಎಚ್) ತಯಾರಿಕೆಗೆ ಬೇಡಿಕೆ ಬರಲಿವೆ ಎಂಬುದನ್ನು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದೆ.