ಬೆಂಗಳೂರು:ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಕೋರಂ ಅಭಾವ ಉಂಟಾಗಿ, ಇಂದು ಹೈ ಡ್ರಾಮಾವೇ ನಡೆದು ಹೋಗಿದ್ದು, ಈಗ ಚುನಾವಣೆಯೇ ಮುಂದೂಡಲಾಗಿದೆ.
ಮೂರು ವರ್ಷಗಳಿಗೊಮ್ಮೆ ಬಮೂಲ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ನರಸಿಂಹಮೂರ್ತಿ ಮತ್ತು ರಾಜ್ ಕುಮಾರ್ ನಡುವೆ ಪೈಪೋಟಿ ಜೋರಾಗಿತ್ತು. ನರಸಿಂಹಮೂರ್ತಿ ಮಾಗಡಿಯ ಹಾಲು ಒಕ್ಕೂಟದ ನಿರ್ದೇಶಕರಾಗಿದ್ದು, ರಾಜ್ ಕುಮಾರ್ ಕನಕಪುರದವರಾಗಿದ್ದಾರೆ.
ಇಬ್ಬರೂ ಕಾಂಗ್ರೆಸ್ನವರೇ ಆದರೂ ನರಸಿಂಹಮೂರ್ತಿಗೆ ಜೆಡಿಎಸ್ ಸಚಿವ ಹೆಚ್ ಡಿ ರೇವಣ್ಣ ಬೆಂಬಲವಿದೆ ಎನ್ನಲಾಗಿದೆ. ಹಾಗಾಗಿ ಸಮ್ಮಿಶ್ರ ಸರ್ಕಾರದಿಂದ ನರಸಿಂಹಮೂರ್ತಿಯವರನ್ನು ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ ರಾತ್ರೋರಾತ್ರಿ ನರಸಿಂಹಮೂರ್ತಿಗೆ 2014 ರಲ್ಲಿ ಅವರು ನಡೆಸಿದ್ದರೆನ್ನಲಾದ ಅವ್ಯವಹಾರವೊಂದರ ಕುರಿತಾಗಿ ನೋಟಿಸ್ ನೀಡಿ ಅನರ್ಹ ಮಾಡಲಾಗಿದೆ. 2014ರಲ್ಲಿ ಪತ್ರಿಕೆಗಳಿಗೆ ಜಾಹೀರಾತು ಕೊಡದೇ ನೇಮಕಾತಿ ಮಾಡಿದ್ದ ಆರೋಪ ನರಸಿಂಹಮೂರ್ತಿಯವರ ಮೇಲಿತ್ತು. ಇದರಿಂದ ನರಸಿಂಹಮೂರ್ತಿ ಅಧ್ಯಕ್ಷ ಸ್ಥಾನಕ್ಕೆ ಯೋಗ್ಯ ವ್ಯಕ್ತಿಯಲ್ಲ ಎನ್ನುವ ಮಾತು ಕೇಳಿಬಂತು.
ಬಮೂಲ್ನಲ್ಲಿ ಒಟ್ಟು 13 ಜನ ನಿರ್ದೇಶಕರಿದ್ದು, ಅವರಲ್ಲಿ 7 ಜನ ಕಾಂಗ್ರೆಸ್, 3 ಬಿಜೆಪಿ ಮತ್ತು 3 ಜೆಡಿಎಸ್ ಪಕ್ಷಗಳಿಗೆ ಸೇರಿದವರು. ಆದ್ರೆ ನಿನ್ನೆ ತಡರಾತ್ರಿಯವರೆಗೂ ಇದ್ದ ನರಸಿಂಹಮೂರ್ತಿಯ ಹೆಸರು ಬೆಳಗಾಗುವಷ್ಟರಲ್ಲಿ ಕೈಬಿಟ್ಟಿದ್ದು ಅನೇಕರಿಗೆ ಶಾಕ್ ಹೊಡೆದಂತಾಗಿತ್ತು. ಖಾಸಗಿ ಹೊಟೇಲ್ನಲ್ಲಿ ಈ ಬಗ್ಗೆ ಕಾಂಗ್ರೆಸ್ ಮುಖಂಡರ ಸಭೆ ಕೂಡ ನಡೆಯಿತು. ಶಾಸಕರಾದ ಎಸ್ ಟಿ ಸೋಮಶೇಖರ್, ಸಂಸದ ಡಿ ಕೆ ಸುರೇಶ್ ಮುಂದಾಳತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ ಕುಮಾರ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸೋದು ನಿರ್ಧಾರವಾಯ್ತು.
ಇದೇ ವೇಳೆ ಡೈರಿಗೆ ಭೇಟಿ ನೀಡಿ ಮಾತಾನಾಡಿದ ಡಿ ಕೆ ಸುರೇಶ್, ನಿರ್ದೇಶಕರುಗಳಿಗೆ ಒಗ್ಗಟ್ಟಾಗಿ ಕೆಲಸ ಮಾಡಿ ಸಂಸ್ಥೆ ಉಳಿಸಿ ಎಂದು ತಿಳಿಸಿದ್ದೇವೆ. ಅಸಮಾಧಾನ ಇಲ್ಲ, ಹೊಸಬರು-ಹಳಬರ ಸಮ್ಮಿಲನದಲ್ಲಿ ಇದು ನಡೆಯಬೇಕು. ಲಕ್ಷಾಂತರ ರೈತರು ಇದನ್ನು ನಂಬಿಕೊಂಡಿದ್ದಾರೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಎರಡು ಅರ್ಜಿಗಳು ಅಧ್ಯಕ್ಷ ಸ್ಥಾನಕ್ಕೆ, ಒಂದು ಉಪಾಧ್ಯಕ್ಷ ಸ್ಥಾನಕ್ಕೆ ಬಂದಿವೆ. ಚುನಾವಣಾ ಅಧಿಕಾರಿಗಳು ಇನ್ನುಳಿದ ನಿರ್ಧಾರ ಮಾಡಲಿದ್ದಾರೆ. ನಾಳೆ ಇಷ್ಟೊತ್ತಿಗೆ ಫಲಿತಾಂಶ ನಿರೀಕ್ಷೆ ಮಾಡಿದ್ದೇವೆ ಅಂತ ತಿಳಿಸಿ ಹೊರಟು ಹೋದರು.
ಕೋರಂ ಇಲ್ಲದೆ ಚುನಾವಣೆ ಮುಂದೂಡಿಕೆ:
ಇದೆಲ್ಲದರ ನಡುವೆ ನರಸಿಂಹಮೂರ್ತಿ ಆಗಿದ್ದಾಗಲಿ ಎಂದು ತಾನೂ ಹೋಗಿ ನಾಮಪತ್ರ ಸಲ್ಲಿಸಿಯೇ ಬಿಟ್ಟರು. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ನರಸಿಂಹಮೂರ್ತಿ ಮತ್ತು ರಾಜ್ ಕುಮಾರ್ ಇಬ್ಬರೂ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆಯೂ ಉಪಾಧ್ಯಕ್ಷರಾಗಿದ್ದ ದೇವನಹಳ್ಳಿಯ ಶ್ರೀನಿವಾಸ್ ಮುಂದುವರೆಯಲಿದ್ದಾರೆ ಎನ್ನುವ ನಿರ್ಧಾರಕ್ಕೆ ಬಂದು ಕೇವಲ ಅವರೊಬ್ಬರೇ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇಷ್ಟೆಲ್ಲದರ ನಡುವೆ ನರಸಿಂಹಮೂರ್ತಿಗೆ ಅನ್ಯಾಯವಾಗಿದೆ ಎಂದು ಅವರ ಬೆಂಬಲಿಗರು ಅನೇಕ ನಿರ್ದೇಶಕರು ಸಭೆಗೆ ಗೈರಾದರು. ಬಮೂಲ್ ಚುನಾವಣಾಧಿಕಾರಿ ನಿರ್ದೇಶಕರುಗಳನ್ನು ಸಭೆಗೆ ಕರೆಯಲೇ ಇಲ್ಲ. ಇದೆಲ್ಲದರ ಪರಿಣಾಮ ಕೋರಂ ಇಲ್ಲದ ಕಾರಣ ಚುನಾವಣೆಯನ್ನು ಮುಂದೂಡಲಾಯ್ತು.
ಇಷ್ಟೆಲ್ಲಾ ಹೈಡ್ರಾಮಾದ ಹಿಂದೆ ಸಚಿವ ಹೆಚ್ ಡಿ ರೇವಣ್ಣ, ಸಂಸದ ಡಿ ಕೆ ಸುರೇಶ್ ನಡುವಣ ಮುಸುಕಿನ ಗುದ್ದಾಟ ಬಹಿರಂಗವಾದಂತಾಯ್ತು. ವಿದೇಶ ಪ್ರವಾಸದಲ್ಲಿರೋ ಸಚಿವ ಡಿ ಕೆ ಶಿವಕುಮಾರ್ ಸ್ವದೇಶಕ್ಕೆ ವಾಪಸ್ಸಾದ ಮೇಲೆ ಮುಂದಿನ ದಿನಾಂಕ ನಿರ್ಧರಿಸಲಾಗುವುದು. ಅಲ್ಲಿವರೆಗೆ ಅಸಮಾಧಾನಗಳೆಲ್ಲಾ ನಿವಾರಣೆಯಾಗಿ ನಿರ್ದೇಶಕರ ಅವಿರೋಧ ಆಯ್ಕೆಯಾಗುತ್ತಾ? ಅಥವಾ ಈ ವಿವಾದ ಮತ್ತಷ್ಟು ಕಗ್ಗಂಟಾಗುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.