ಬೆಂಗಳೂರು: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಬಿಬಿಎಂಪಿ ವಾರ್ಡ್ಗಳ ಮರು ವಿಂಗಡನೆಗೆ ನಿರ್ಧರಿಸಲಾಗಿದ್ದು, ಮುಂದಿನ ಚುನಾವಣೆಯ ಹೊತ್ತಿಗೆ ವಾರ್ಡ್ಗಳಲ್ಲಿ ಬದಲಾವಣೆ ಆಗಲಿದೆ.
ಬಿಬಿಎಂಪಿಯಿಂದ ವಾರ್ಡ್ ಮರು ವಿಂಗಡನೆಗೆ ನಿರ್ಧಾರ ಮಾಡಲಾಗಿದ್ದು, ಜನಸಂಖ್ಯೆ ಆಧಾರದಲ್ಲಿ ವಾರ್ಡ್ ವಿಂಗಡನೆ ನಡೆಯಲಿದೆ. ಎಲ್ಲ ವಾರ್ಡ್ಗಳಲ್ಲೂ ಜನಸಂಖ್ಯೆ ಸಮನಾಗಿರುವಂತೆ ನಿಗಾವಹಿಸಲಾಗುತ್ತೆ. ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆಯಿಂದ ಸರ್ವೆ ನಡೆಯಲಿದೆ. ಸರಾಸರಿ ವಾರ್ಡ್ನಲ್ಲಿ 42,645 ಜನರಿದ್ದು, ಕೆಲ ವಾರ್ಡ್ಗಳಲ್ಲಿ 53 ಸಾವಿರ ಜನಸಂಖ್ಯೆ ಇದೆ. 2011ರ ಜನಗಣತಿ ಪ್ರಕಾರ ವಾರ್ಡ್ ಮರುವಿಂಗಡನೆ ಆಗಲಿದೆ.
ಈ ಸಂಬಂಧ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕೇಂದ್ರ ವಲಯದಲ್ಲಿ 132 ವಾರ್ಡ್, ಹೊರವಲಯದಲ್ಲಿ 66ವಾರ್ಡ್ ಗಳಿವೆ. ಆಗಸ್ಟ್ ಒಳಗೆ ಕರಡುಪ್ರತಿ ಸಿದ್ಧವಾಗಲಿದೆ. 7 ನಗರಸಭೆ, 1 ಪಟ್ಟಣ ಪಂಚಾಯಿತಿ, 110 ಹಳ್ಳಿ ಬಿಬಿಎಂಪಿಗೆ ಸೇರ್ಪಡೆಯಾಗಿದೆ. ಹೊಸ ವಾರ್ಡ್ ಸೇರ್ಪಡೆ ವೇಳೆಯೂ ವಾರ್ಡ್ ವಿಂಗಡನೆ ಮುಂದೂಡಲ್ಪಟ್ಟಿತ್ತು. ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ವಾರ್ಡ್ ಮರುವಿಂಗಡನೆಗೆ ತೀರ್ಮಾನ ಮಾಡಲಾಗಿದೆ. ಆರ್ಆರ್ ನಗರ, ಬೊಮ್ಮನಹಳ್ಳಿ, ಸೌತ್ ವಿಭಾಗದ ವಾರ್ಡ್ಗಳ ಮರುವಿಂಗಡನೆ ನಡೆಯಲಿದೆ ಎಂದು ತಿಳಿಸಿದರು.
ಅಕ್ಟೋಬರ್ ಅಂತ್ಯದ ಹೊತ್ತಿಗೆ ವಾರ್ಡ್ಗಳ ಪುನರರಚನೆ ಕಾರ್ಯ ಅಂತ್ಯಗೊಳ್ಳಲಿದೆ. ಶಾಸಕರು, ಕಾರ್ಪೋರೇಟರ್ಗಳ ಅಭಿಪ್ರಾಯ ಆಲಿಸಿ ಪುನರ್ರಚನೆ ನಡೆಯುತ್ತಿದೆ. ಬೆಂಗಳೂರು ಹೊರವಲಯದ ವಾರ್ಡ್ಗಳಲ್ಲಿ ಹೆಚ್ಚಿನ ಬದಲಾವಣೆ ಆಗೋದು ಪಕ್ಕಾ ಆಗಿದೆ. 2001ರ ಜನಗಣತಿ ಮತ್ತು 2011ರ ಜನಗಣತಿಗೆ ಹೋಲಿಸಿದರೆ ಶೇ.44ರಷ್ಟು ಜನಸಂಖ್ಯೆ ಹೆಚ್ಚಾಗಿದೆ. ಬೆಂಗಳೂರು ಕೇಂದ್ರ ಪ್ರದೇಶದ ವಾರ್ಡ್ಗಳಲ್ಲಿ ಕೇವಲ ಶೇ.17ರಷ್ಟು ಜನಸಂಖ್ಯೆ ಹೆಚ್ಚಾಗಿದೆ. ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜನಸಂಖ್ಯೆಯ ಪ್ರಮಾಣ ತೀವ್ರತರದಲ್ಲಿ ಹೆಚ್ಚಾಗಿದೆ. ಯಶವಂತಪುರದಲ್ಲಿ ಶೇ.162, ಬೆಂಗಳೂರು ದಕ್ಷಿಣದಲ್ಲಿ ಶೇ.156ರಷ್ಟು ಹೆಚ್ಚಾಗಿದೆ. ಮಹದೇವಪುರದಲ್ಲಿ ಶೇ. 140, ಬೊಮ್ಮನಹಳ್ಳಿಯಲ್ಲಿ ಶೇ.128ರಷ್ಟು ಜನಸಂಖ್ಯೆ ಹೆಚ್ಚಾಗಿದೆ. ಒಟ್ಟಾರೆ, ದಿನೇದಿನೇ ಬೆಳೆಯುತ್ತಿರುವ ಉದ್ಯಾನನಗರಿ ಈಗ ವಾರ್ಡ್ ಮಟ್ಟದಲ್ಲಿ ಬದಲಾವಣೆಗೆ ಸಿದ್ಧವಾಗುತ್ತಿದೆ.