ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದ ವರ್ಷದಿಂದಲೂ ದೇಶದಲ್ಲಿ ಕರ್ನಾಟಕವೇ ಅತಿಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ನಡೆದ 15ನೇ ಕೇಂದ್ರ ಹಣಕಾಸು ಆಯೋಗದ ಸಭೆಯಲ್ಲಿ ಮಾತನಾಡಿದ ಅವರು, ಅಬಕಾರಿ, ಮೋಟಾರು ವಾಹನ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಜಿಎಸ್ಟಿ ಸೇರಿದಂತೆ ಹಲವು ತೆರಿಗೆಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಸಂಗ್ರಹಿಸುವ ಕರ್ನಾಟಕ ರಾಷ್ಟ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.
ರೈತರನ್ನು ಕೃಷಿಯಲ್ಲಿ ಉತ್ತೇಜಿಸಲು ಶೂನ್ಯ ಬಂಡವಾಳದ ಕೃಷಿ ಚಟುವಟಿಕೆಗೆ ಪ್ರೋತ್ಸಾಹ, ಇಸ್ರೇಲ್ ಮಾದರಿಯ ತಂತ್ರಜ್ಞಾನ, ಉತ್ಪಾದನಾ ವಲಯಕ್ಕೆ ಹಾಗೂ ಮೆಟ್ರೋ ದಂತಹ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.