ಬೀದರ್: ಕಳೆದೊಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದ ಪರಿಣಾಮ ವೃದ್ಧೆ ಕಂಗಾಲಾಗಿದ್ದಾರೆ.

ಜಿಲ್ಲೆಯ ಔರಾದ್ ತಾಲೂಕಿನ ಮಹಾರಾಜವಾಡಿ ಗ್ರಾಮದ ಬಾಲಮ್ಮ ಕುಂಬಾರ ಎಂಬವರ ಮನೆ ಗೋಡೆ ಕುಸಿದಿದೆ. ಇದು ಮಣ್ಣಿನಿಂದ ನಿರ್ಮಿಸಿದ ಹಳೆಯ ಮನೆಯಾಗಿದ್ದು, ರಾತ್ರಿ ಹೊತ್ತಿನಲ್ಲಿ ವೃದ್ಧೆ ಮಲಗಿರುವಾಗ ಗೋಡೆ ಕುಸಿದಿದೆ. ಮುಂಜಾನೆ ಆಗುವಷ್ಟರಲ್ಲಿ ಮನೆ ತುಂಬೆಲ್ಲಾ ನೀರು ಆವರಿಸಿಕೊಂಡು ಮೇಲ್ಚಾವಣಿ ಕೂಡಾ ಕುಸಿಯುವ ಹಂತ ತಲುಪಿದೆ.
ಹೀಗಾಗಿ ಸದ್ಯ ತನ್ನ ಮನೆ ಬಿಟ್ಟು ಪಕ್ಕದವರ ಮನೆಯಲ್ಲಿ ವೃದ್ಧೆ ನೆಲೆಸಿದ್ದಾರೆ. ಮನೆ ಇಲ್ಲದೆ ಸಂಕಷ್ಟಕ್ಕೊಳಗಾದ ಅವರಿಗೆ ಮನೆಯನ್ನು ಮರು ನಿರ್ಮಿಸುವುದು ಸುಲಭದ ಮಾತಲ್ಲ. ಹೀಗಾಗಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ವೃದ್ಧೆ ಬಾಲಮ್ಮ ಆಗ್ರಹಿಸಿದ್ದಾರೆ.