ಬೀದರ್: ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ನಡೆದಿದೆ. ಒಂದೆಡೆ ಕೊರೊನಾ ಪ್ರಕರಣ ಕಡಿಮೆಯಾಗಿವೆ ಎಂಬ ಸಂತಸದ ಸುದ್ದಿ ನಡುವೆ ಕೊರೊನಾ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗ್ತಿದ್ದಂತೆ ಜಿಲ್ಲಾಸ್ಪತ್ರೆಯ ಕೊರೊನಾ ವಾರ್ಡ್ನತ್ತ ಯಾರೂ ಸುಳಿಯುತ್ತಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡ ಖದೀಮರು ಆಸ್ಪತ್ರೆಯಲ್ಲಿನ ಎರಡು ವೆಂಟಿಲೇಟರ್ ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಬ್ರಿಮ್ಸ್ ಆಸ್ಪತ್ರೆಯ ಹಿಂಬದಿಯ ಕಿಟಕಿಯಿಂದ ಕಳೆದ ರಾತ್ರಿ ಕಳ್ಳರು ಎರಡು ವೆಂಟಿಲೇಟರ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕಳೆದ 4 ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಪತ್ತೆಯಾಗದೆ ಖಾಲಿಯಾದ ಕೊರೊನಾ ವಾರ್ಡ್ನಲ್ಲಿ ಕಳ್ಳತನವಾಗಿದೆ.
ಸುಮಾರು 25 ಲಕ್ಷ ರೂ.ನ ಎರಡು ವೆಂಟಿಲೇಟರ್ಗಳನ್ನು ಎಗರಿಸಿರುವ ಖದೀಮರ ಕೃತ್ಯದಿಂದ ಜಿಲ್ಲಾಸ್ಪತ್ರೆ ಸಿಬ್ಬಂದಿ ದಂಗಾಗಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಭೇಟಿ ನೀಡಿದ್ದು, ಈ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.