ಬೀದರ್: ಕೊರೊನಾ ಸಂಕಷ್ಟದ ನಡುವೆ ದೇಶದ ಶೈಕ್ಷಣಿಕ ವ್ಯವಸ್ಥೆ ಬುಡಮೇಲಾಗಿದ್ದು ಕಳೆದ ಆರು ತಿಂಗಳಿಂದ ವಿದ್ಯಾರ್ಥಿಗಳು ಶಾಲೆಯಿಂದ ದೂರವಿದ್ದು, ಆನ್ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ.
ಇನ್ನು ಸರ್ಕಾರ ಶಾಲೆ ಆರಂಭಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿದೆ. ಆದರೆ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಠಾರ ಶಾಲೆಗಳ ಮೂಲಕ ಹೊಸ ದಾರಿ ಹುಡುಕಿಕೊಂಡಿದೆ.
ಜಿಲ್ಲೆಯಲ್ಲಿನ ಒಟ್ಟು 1.68 ಲಕ್ಷ ವಿದ್ಯಾರ್ಥಿಗಳ ಪೈಕಿ 1,13,000 ವಿದ್ಯಾರ್ಥಿಗಳಿಗೆ ವಠಾರ ಶಾಲೆಯ ಮೂಲಕ ಶೈಕ್ಷಣಿಕ ವಾತಾವರಣ ಕಲ್ಪಿಸುವಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಯಶಸ್ವಿಯಾಗಿದ್ದು, 7,013 ಶಿಕ್ಷಕರು ವಠಾರ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದಾರೆ.
ಶಾಲೆಯಿಂದ ಹೊರಬಂದು ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ 25 ವಿದ್ಯಾರ್ಥಿಗಳಿಗೊಬ್ಬ ಶಿಕ್ಷಕರಂತೆ, ಸಮುದಾಯ ಕೇಂದ್ರ, ಮಸೀದಿ, ಚರ್ಚ್, ಮಂದಿರ, ಆಲದ ಮರ ಇಂತಹ ಪ್ರದೇಶಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿ ಪಾಠ ಮಾಡಲಾಗುತ್ತಿದೆ.