ಬಸವಕಲ್ಯಾಣ: ವಿಶ್ವದಾದ್ಯಂತ ಜನರಲ್ಲಿ ಭೀತಿ ಹುಟ್ಟಿಸಿದ ಮಹಾಮಾರಿ ಕೊರೊನಾ ವೈರಸ್ ಶರಣರ ನಾಡು ಕಲ್ಯಾಣದ ಜನರನ್ನು ಆತಂಕಕ್ಕೀಡುಮಾಡಿದ್ದು, ಕಲ್ಯಾಣದ ಮನೆ, ಮನೆಗಳಲ್ಲಿ ಈಗ ಕೊರೊನಾದ್ದೇ ಚರ್ಚೆ ಆರಂಭವಾಗಿದೆ.
ನಗರ ಸೇರಿದಂತೆ ತಾಲೂಕಿನ ಅನೇಕ ಹಳ್ಳಿಗಳಿಂದ ಗಲ್ಫ್ ರಾಷ್ಟ್ರಗಳಿಗೆ ಸಾವಿರಾರು ಜನ ಕಾರ್ಮಿಕರು ಉದ್ಯೋಗಕ್ಕಾಗಿ ತೆರಳುವುದು ಸಾಮಾನ್ಯವಾಗಿದೆ. ಅಲ್ಲದೆ ಬಹುತೇಕರು ತಮ್ಮ ವೀಸಾ ಅವಧಿ ಮುಗಿದ ಕಾರಣ ಹಾಗೂ ವಿವಿಧ ಕೆಲಸ, ಕಾರ್ಯಗಳ ಕಾರಣ ವಾಪಸ್ ಬರುತ್ತಿದ್ದು, ಬಂದವರಲ್ಲಿ ಕೊರೊನಾ ಪತ್ತೆಯಾಗಬಹುದು ಎಂಬ ಚಿಂತೆ ಕಾಡುತ್ತಿದೆ.
ಮೂಲಗಳ ಪ್ರಕಾರ ಕಳೆದ ಫೆ. 15ರಿಂದ ಇದುವರೆಗೆ ದುಬೈ, ಸೌದಿ ಅರೇಬಿಯಾ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಸುಮಾರು 20ಕ್ಕೂ ಅಧಿಕ ಜನರು ಸ್ವಗ್ರಾಮಕ್ಕೆ ಮರಳಿದ ಬಗ್ಗೆ ಮಾಹಿತಿ ಇದ್ದು, ಇವರೆಲ್ಲರಿಗೂ ಕೊರೊನಾ ಪರೀಕ್ಷೆ ಮಾಡಿಸುವುದು ಅನಿವಾರ್ಯವಾಗಿದೆ. ಅವರೆಲ್ಲರನ್ನು ಹುಡುಕುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಮಂಠಾಳ, ಮುಡಬಿ, ರಾಜೇಶ್ವರ, ಗೋಕುಳ, ಕಿಟ್ಟಾ ಭಾಗದಿಂದ ಅತಿ ಹೆಚ್ಚು ಜನ ಹೊರ ದೇಶಗಳಿಗೆ ತೆರಳಿದ್ದು, ಮರಳಿ ಗ್ರಾಮಕ್ಕೆ ಬಂದವರ ಮೇಲೆ ಆರೋಗ್ಯ ಇಲಾಖೆಯಿಂದ ಆಶಾ ಹಾಗೂ ಎನ್‌ಎಂ ಸಿಬ್ಬಂದಿ ಮೂಲಕ ವಿಶೇಷ ನಿಗಾ ಇಡಲಾಗಿದೆ. ವಿವಿಧ ದೇಶಗಳಿಂದ ಮರಳಿ ಬಂದವರಲ್ಲಿ ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಕೊರೊನಾ ವೈರಸ್‌ನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಇಬ್ಬರು ಶಂಕಿತರು ಆಸ್ಪತ್ರೆಗೆ ದಾಖಲು
ಅಬುಧಾಬಿ ಮತ್ತು ಓಮನ್ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ತೆರಳಿದ್ದ ತಾಲೂಕಿನ ಇಬ್ಬರು ವ್ಯಕ್ತಿಗಳು ವಾಪಸಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಮ್ಮು ಮತ್ತು ಗಂಟಲು ಕೆರೆತ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇವರಿಬ್ಬರ ರಕ್ತದ ಮಾದರಿ ಹಾಗೂ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬರುವವರೆಗೂ ಇವರನ್ನು ಸರ್ಕಾರಿ ಆಸ್ಪತ್ರೆಯ ವಿಶೇಷ ನಿಗಾ ಘಟಕದಲ್ಲಿಯೇ ಇರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.