ಬಸವಕಲ್ಯಾಣ(ಬೀದರ್): ತಾಲೂಕಿನ ರಾಜೇಶ್ವರ ಗ್ರಾಮದ ಮಾವಿನ ತೋಟದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ, ಮಾವಿನಕಾಯಿ ಸಮೇತ ಮಾವಿನ ಗಿಡಗಳು ಸುಟ್ಟು ಭಸ್ಮವಾಗಿವೆ.
ಗ್ರಾಮದ ರಾಜಶೇಖರ್ ಗುಂಡಪ್ಪ ಅವರಿಗೆ ಸೇರಿದ ಸರ್ವೆ ನಂ. 361/1ರಲ್ಲಿಯ 2 ಎಕರೆ 32 ಗುಂಟೆ ತೋಟದಲ್ಲಿನ ಸುಮಾರು ಆರು ನೂರು ಮಾವಿನ ಗಿಡಗಳು ಬೆಂಕಿಗೆ ಆಹುತಿಯಾಗಿವೆ. ಗುರುವಾರ ಮಧ್ಯಾಹ್ನ 12ರ ಸುಮಾರಿಗೆ ತೋಟದಲ್ಲಿ ಬೆಂಕಿ ಹತ್ತಿದ್ದು, ಕೆಲ ನಿಮಿಷದಲ್ಲಿಯೇ ಇಡೀ ತೋಟಕ್ಕೆ ವ್ಯಾಪಿಸಿದೆ. ಹೀಗಾಗಿ ತೋಟದಲ್ಲಿ 10 ವರ್ಷಗಳ ಹಿಂದೆ ನೆಡಲಾಗಿರುವ ಮಾವಿನ ಗಿಡಗಳು ಮಾವಿನಕಾಯಿಯೊಂದಿಗೆ ಬೆಂಕಿಗೆ ಸುಟ್ಟು ಹೋಗಿವೆ. ಸುಮಾರು 5 ಲಕ್ಷ ರೂ. ಮೌಲ್ಯದ ಬೆಳೆ ಹಾನಿಗೀಡಾಗಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಅನಾಹುತಕ್ಕೂ ಮೊದಲು ಎಚ್ಚೆತ್ತ ಪೊಲೀಸರಿಂದ ಜಿಲೆಟಿನ್ ವಶ: ಪ್ರಕರಣದಿಂದ ಮಾಲೀಕನ ಹೆಸರೇ ನಾಪತ್ತೆ
ಮಾವಿನ ಗಿಡಗಳಿಂದ ಅದಾಯ ನಿರೀಕ್ಷೆಯಲ್ಲಿರುವ ರೈತ ಸಂಕಷ್ಟಕ್ಕೆ ಸಿಲುಕಿದ್ದು, ಬ್ಯಾಂಕಿನಿಂದ 4 ಲಕ್ಷ ರೂ. ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ. ತೋಟದ ಅಕ್ಕ-ಪಕ್ಕದಲ್ಲಿರುವ ಬೇರೆಯವರ ಹೊಲ-ಗದ್ದೆಗಳಿಗೂ ಬೆಂಕಿ ಆವರಿಸಿ ಏಳೆಂಟು ಕಡೆ ಕಣಿಕೆ ಬಣವೆಗಳು ಸುಟ್ಟಿವೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಾಯದೊಂದಿಗೆ ಬೆಂಕಿ ನಂದಿಸಿದ್ದಾರೆ.