ಬಸವಕಲ್ಯಾಣ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದ ನಿಮಿತ್ತ ನಗರದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು.
ನಗರದ ಪ್ರಮುಖ ರಸ್ತೆಗಳ ಮೂಲಕ ಸುಮಾರು 4 ಕಿ.ಮೀ. ನಡೆದ ಪಥ ಸಂಚಲನದಲ್ಲಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 300ಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡು ಗಮನ ಸೆಳೆದರು. ಭಾರತ ಮಾತೆ ಭಾವಚಿತ್ರ, ಭಗವಾಧ್ವಜದೊಂದಿಗೆ ನಡೆದ ಪಥ ಸಂಚಲನದಲ್ಲಿ ಕೈಯಲ್ಲಿ ಲಾಠಿಯೊಂದಿಗೆ ಸಂಘದ ಸಾಂಪ್ರದಾಯಿಕ ವೇಷ ಧರಿಸಿದ್ದ ಸ್ವಯಂ ಸೇವಕರು, ಶಿಸ್ತಿನಿಂದ ಹೆಜ್ಜೆ ಹಾಕಿದರು. ಇನ್ನು ರಸ್ತೆ ಬದಿ ನಿಂತಿದ್ದ ಜನರ ಸ್ವಯಂ ಸೇವಕರ ಮೇಲೆ ಪುಷ್ಪವೃಷ್ಠಿ ಮಾಡಿ ಸ್ವಾಗತಿಸಿದರು.
ಗುರುವಾರ ಮಧ್ಯಾಹ್ನ 3-45ಕ್ಕೆ ಬಸವೇಶ್ವರ ಪಬ್ಲಿಕ್ ಶಾಲೆ ಮೈದಾನದಿಂದ ಆರಂಭವಾಗಿ ನಗರದ ಅಂಬೇಡ್ಕರ್ ವೃತ್ತ, ಹುಲಸೂರು ರಸ್ತೆ ಕ್ರಾಸ್, ನಾರಾಯಣಪುರ ಕ್ರಾಸ್, ಬನಶಂಕರಿ ಗಲ್ಲಿ, ಬಸವೇಶ್ವರ ದೇವಸ್ಥಾನ, ಕಾಳಿಗಲ್ಲಿ ಮೂಲಕ ಮುಖ್ಯ ರಸ್ತೆ ಮಾರ್ಗವಾಗಿ ಗಾಂಧಿ ಚೌಕ್, ಬಸವೇಶ್ವರ ವೃತ್ತ ಮೂಲಕ ಶಾಲೆ ಮೈದಾನದವರೆಗೆ ಪಥ ಸಂಚಲನ ಜರುಗಿತು.
ಪಥ ಸಂಚಲನ ನಡೆದ ಮಾರ್ಗದ ಆಯ್ದ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.