ಬೀದರ್: ವಿಧಿಯಾಟ ಹೇಗಿದೆ ನೋಡಿ, ಲಾಕ್ಡೌನ್ ವೇಳೆಯಲ್ಲಿ ವಿದೇಶದಲ್ಲಿ ಸಿಲುಕಿ ಸಾಕಷ್ಟು ಸಂಕಷ್ಟ ಅನುಭವಿಸಿ ವಿದೇಶದಿಂದ ಸ್ವಗ್ರಾಮಕ್ಕೆ ವಾಪಸ್ಸಾದ ಯುವಕನೊಬ್ಬ ಹಾವು ಕಡಿದು ಸಾವನಪ್ಪಿರುವ ದಾರುಣ ಘಟನೆ ನಡೆದಿದೆ.

ಜಿಲ್ಲೆಯ ಹುಮನಾಬಾದ್ ತಾಲೂಕಿನ ಸಿಂಧನಕೇರಾ ಗ್ರಾಮದ ಸತ್ತಾರ(32) ಎಂಬ ಯುವಕನಿಗೆ ಮನೆಯಲ್ಲೇ ವಿಷ ಸರ್ಪ ಕಡಿದು ಚಿಕಿತ್ಸೆ ಪಡೆಯುವ ಮೊದಲೇ ಕೊನೆಯುಸಿರೆಳೆದಿದ್ದಾನೆ.

ಸೌದಿ ಅರೇಬಿಯಾದ ಕುವೈತ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ, ಕೊರೊನಾ ಸಂದರ್ಭದಲ್ಲಿ ಲಾಕ್ಡೌನ್ ಹೇರಿದ ಕಾರಣ ಊಟಕ್ಕೂ ಗತಿ ಇಲ್ಲದೆ ಸಾವಿನ ಸಂಕಷ್ಟದಿಂದ ಪಾರಾಗಿ, ಬದುಕಿತು ಬಡ ಜೀವ ಎಂದು ಮನೆಗೆ ಬಂದು ಸೇರಿದ್ದನು. ಆದರೆ ಸ್ವಗ್ರಾಮಕ್ಕೆ ಬಂದು ಎರಡು ವಾರದಲ್ಲೇ ಮನೆಯಲ್ಲಿ ವಿಷ ಸರ್ಪ ಕಡಿದು ಸಾವನಪ್ಪಿರುವುದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ.