ಬೀದರ್: ಕೋವಿಡ್-19 ವೈರಸ್ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಹೀಗಾಗಿ ಹೊರಗಿನಿಂದ ಬರುವವರು ಯಾರೇ ಆದರೂ ಅವರನ್ನ ಮನೆಗೆ ಸೇರಿಸಿಕೊಳ್ಳಬೇಡಿ. ಸಾಮಾಜಿಕ ಅಂತರ ಕಾಪಾಡಿಕೊಂಡು ಲಾಕ್ಡೌನ್ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ಕೊರೊನಾ ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹದೇವ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಲ್ಡ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ. ಓಲ್ಡ್ ಸಿಟಿಯ ಕಂಟೇನ್ಮೆಂಟ್ ಏರಿಯಾದಲ್ಲಿ ನಕಲಿ ಪಾಸ್ಗಳು ಕಂಡುಬರುತ್ತಿವೆ. ಹೀಗಾಗಿ ಎಲ್ಲ ಪಾಸ್ಗಳನ್ನ ರದ್ದು ಮಾಡಲಾಗುತ್ತಿದ್ದು,ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲು ಚಿಂತಿಸಲಾಗಿದೆ ಎಂದರು.
ಇನ್ನು,ಹೊರ ರಾಜ್ಯಗಳಿಂದ 2,860 ಜನರು ಅಧಿಕೃತವಾಗಿ ಜಿಲ್ಲೆಗೆ ಬಂದಿದ್ದಾರೆ. ಅವರನ್ನ ಗ್ರಾಮೀಣ ಭಾಗದಲ್ಲಿ ಕ್ವಾರಂಟೈನ್ ಮಾಡಲಾಗಿದ್ದು,ಚೆಕ್ಪೊಸ್ಟ್ನಿಂದ ತಪ್ಪಿಸಿಕೊಂಡು ಬಂದವರನ್ನ ಜನರೇ ಗುರುತಿಸಿ ಜಿಲ್ಲಾಡಳಿತದ ಗಮನಕ್ಕೆ ತಂದರೆ, ಅಂತಹವರನ್ನ ಕ್ವಾರೆಂಟೈನ್ ಮಾಡಲಾಗುವುದು. ಇನ್ನು ಬಿಹಾರ, ಉತ್ತರ ಪ್ರದೇಶಕ್ಕೆ ಹೊಗುವ 560 ಜನ ವಲಸೆ ಕಾರ್ಮಿಕರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ನೆರೆಯ ಮಹಾರಾಷ್ಟ್ರದಿಂದ ಬರುವ 1,500ಕ್ಕೂ ಅಧಿಕ ಜನರಿಗೆ ಹಂತ ಹಂತವಾಗಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಒಂದೇ ಬಾರಿ ಎಲ್ಲರನ್ನೂ ಬಿಟ್ಟರೆ, ಸೋಂಕು ಹರಡುವ ಭೀತಿ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಓಲ್ಡ್ ಸಿಟಿಯಲ್ಲಿ ಸಾಮೂಹಿಕ ವೈದ್ಯಕೀಯ ತಪಾಸಣೆ ನಡೆಯುತ್ತಿದ್ದು,ಈಗಾಗಲೇ 3,500 ಜನರ ತಪಾಸಣೆ ಮಾಡಲಾಗಿದೆ. ಇನ್ನೂ 2,500 ಜನರ ತಪಾಸಣೆ ಮಾಡಲಾಗುವುದು. ಹಳೆ ಸಿಟಿಯನ್ನ ಕಂಟೇನ್ಮೆಂಟ್ ಏರಿಯಾ ಆಗಿರುವುದರಿಂದ ಇನ್ನಷ್ಟು ಬಿಗಿ ಕ್ರಮಗಳು ಅನಿವಾರ್ಯವಾಗಿದೆ ಎಂದರು.