ಬೀದರ್ : ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಇರುವ ಸವಾಲುಗಳು ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಎದುರು ಹಲವಾರು ಬೇಡಿಕೆಗಳು ಬಂದಿವೆ.
ನಗರದ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಚಿವ ಪ್ರಭು ಚವ್ಹಾಣ್ ವೇದಿಕೆ ಮೇಲೆ ಹೋರಾಟಗಾರರು, ಚಿಂತಕರು, ತಜ್ಞರ ಸವಾಲುಗಳಿಗೆ ಸಲಿಸಾಗಿ ಉತ್ತರಿಸುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಲು ಮುಂದಾಗಿದ್ದಾರೆ.
ಕೈಗಾರಿಕೋದ್ಯಮ ಸ್ಥಾಪನೆ, ಕುಡಿಯುವ ನೀರು, ನೀರಾವರಿ ಯೋಜನೆ ಸ್ಥಾಪನೆ, ತೆಲಂಗಾಣದ ಕನ್ನಡ ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು, ಪ್ರವಾಸೋದ್ಯಮ ಅಭಿವೃದ್ಧಿ, ಕನ್ನಡ ಭವನ ನಿರ್ಮಾಣ ಸೇರಿದಂತೆ ಹಲವಾರು ಅಹವಾಲುಗಳು ಸಚಿವರೆದುರು ಬಂದವು. ಸಚಿವರೂ ಕೂಡ ಈ ಎಲ್ಲ ಪ್ರಶ್ನೆಗಳಿಗೆ ಅಷ್ಟೇ ಸರಳವಾಗಿ ಜೋಪಾನವಾಗಿ ಉತ್ತರಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದರು. ವೇದಿಕೆ ಮೇಲೆ ಸಂಸದ ಭಗವಂತ ಖೂಬಾ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.