ಬಸವಕಲ್ಯಾಣ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ, ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣದಿಂದ ಬಳ್ಳಾರಿವರೆಗೆ ನಡೆಯಲಿರುವ ರೈತರ ಕಾಲ್ನಡಿಗೆ (ಪಾದಯಾತ್ರೆ) ನಗರದಲ್ಲಿ ಚಾಲನೆ ನೀಡಲಾಯಿತು.
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಾಗನೂರ, ಸಿರಿವಾರ ನೀರಾವರಿ ಭೂ ರಕ್ಷಣಾ ಹೋರಾಟ ಸಮಿತಿ ಬಳ್ಳಾರಿ ಸಹಯೋಗದೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಗುರು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಬಸವಕಲ್ಯಾಣದಿಂದ 400 ಕಿಲೋ ಮೀಟರ್ ನಡೆಯಲಿರುವ ಪಾದಯಾತ್ರೆ ಮಾರ್ಚ್ 23ರಂದು ಬಳ್ಳಾರಿಯಲ್ಲಿ ಸಮಾರೋಪಗೊಳ್ಳಲಿದ್ದು, ಅಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಜರುಗಲಿದೆ.
ರೈತ ವಿರೋಧಿ ಕಾಯ್ದೆ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿ ಅಕ್ರೋಶ ವ್ಯಕ್ತಪಡಿಸಲಾಯಿತು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತರಿಗೆ ಮಾರಕವಾಗಿರುವ ಈ ಮೂರು ಕೃಷಿ ಕಾಯಿದೆಗಳನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ: ಚಿಕೂನ್ಗುನ್ಯಾ ಭೀತಿ: ಜಾಪೂರವಾಡಿ ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಜಿ.ಜೆ. ಹಳ್ಳಿ ನಾರಾಯಣ ಸ್ವಾಮಿ ಮಾತನಾಡಿ, ಕೃಷಿ ಕಾಯ್ದೆ ವಿರೋಧಿಸಿ ದೇಶದ ಅನ್ನದಾತರು ಕಳೆದ 2 ತಿಂಗಳಿಂದ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ರೈತರ ಹೋರಾಟ ಇತಿಹಾಸ ಪುಟದಲ್ಲಿ ನಿಲ್ಲುವಂತಹ ಹೋರಾಟವಾಗಿದೆ. ನಮ್ಮ ಮತಗಳು ಪಡೆದು ನಮ್ಮನ್ನು ಆಳುವವರ ವಿರುದ್ಧ ಇಂದು ಹೋರಾಟ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಾಹಿತಿ ಸ. ರಘುನಾಥ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನುಗಳಿಂದ ಇಂದು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಕಾಯಿದೆಗಳಿಂದ ರೈತರು ಕಾರ್ಖಾನೆಗಳ ಹಾಗೂ ಸರ್ಕಾರದ ಗುಲಾಮರಾಗುತ್ತಾರೆ. ಜತೆಗೆ ಅಂಬಾನಿ, ಅದಾನಿ ಸೇರಿ ಬಂಡವಾಳ ಶಾಹಿಗಳಿಗೆ ಹಣ ಮಾಡಿಕೊಡಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಟೀಕಿಸಿದರು.