ಬೀದರ್: ಕೊರೊನಾ ಸಂಕಷ್ಟದಿಂದ ಶಾಲೆ, ಕಾಲೇಜುಗಳು ಪ್ರಾರಂಭವಾಗದೆ ಮಕ್ಕಳಿಗೆ ಮನೆಯಲ್ಲೇ ಆನ್ಲೈನ್ ಶಿಕ್ಷಣ ನೀಡುತ್ತಿರುವ ಸರ್ಕಾರದ ಯೋಜನೆ ಈ ಬಡ ವಿದ್ಯಾರ್ಥಿಗಳ ಪಾಲಿಗೆ ಗಗನ ಕುಸುಮವಾಗಿದೆ.
ಬೀದರ್ ತಾಲೂಕಿನ ಗಾದಗಿ ಗ್ರಾಮದಲ್ಲಿ ಕೆಲ ವಿದ್ಯಾರ್ಥಿಗಳು ಹೇಗಾದರೂ ಮಾಡಿ ಶಿಕ್ಷಣ ಪಡೆಯಬೇಕು ಎಂದು ಬೇರೆಯವರ ಜಮೀನಿನಲ್ಲಿ ಹತ್ತಿ ಬಿಡಿಸುವ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಒಂದು ದಿನಕ್ಕೆ 12 ಕೆಜಿವರೆಗೆ ಹತ್ತಿ ಬಿಡಿಸ್ತಾ ಇದಾರೆ. ಇದಕ್ಕೆ ರೈತರು ಪ್ರತಿ ಕೆಜಿಗೆ 6 ರೂಪಾಯಿಯಂತೆ ಹಣ ನೀಡ್ತಿದ್ದು, ದಿನಕ್ಕೆ ಎನಿಲ್ಲ ಅಂದ್ರು ನೂರು ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. ಈ ಹಣ ಒಟ್ಟುಗೂಡಿಸಿ ನಾವೆಲ್ಲರೂ ಮೊಬೈಲ್ ಖರೀದಿ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಆನ್ಲೈನ್ ಶಿಕ್ಷಣ ಪಡೆಯುವುದು ಬಡವರ ಪಾಲಿಗೆ ಬಹಳ ಕಷ್ಟವಾಗಿದೆ. ಹೇಗಾದರೂ ಶಾಲಾ-ಕಾಲೇಜು ಆರಂಭವಾದ್ರೆ ನಮ್ಮ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯಬಹುದು. ಆ ಕೆಲಸ ಆದಷ್ಟು ಬೇಗ ಆಗಬೇಕು ಎಂದು ಪೋಷಕರು ಬೇಸರ ವ್ಯಕ್ತಪಡಿಸಿದರು.