ಬೀದರ್: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿದ ಆರೋಪದ ಮೇಲೆ ನಗರಸಭೆ ಪೌರಾಯುಕ್ತ ಸುರೇಶ ಬಬಲಾದ ಅಮಾನತ್ತುಗೊಂಡ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನದಲ್ಲಿ ನಗರಸಭೆ ನೂತನ ಪೌರಾಯುಕ್ತರಾಗಿ ಮೀನಾಕುಮಾರಿ ಬೋರಾಳಕರ್ ಅಧಿಕಾರ ವಹಿಸಿಕೊಂಡರು.
ನಗರಸಭೆ ಪೌರಾಯುಕ್ತರ ಸ್ಥಾನಕ್ಕೆ ಮೀನಾಕುಮಾರಿ ಬೋರಾಳಕರ್ ಅವರನ್ನು ನೇಮಕ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಬುಧವಾರ ಸಂಜೆ 5ರ ಸುಮಾರಿಗೆ ನೂತನ ಪೌರಾಯಕ್ತರಾಗಿ ಮೀನಾಕುಮಾರಿ ಬೋರಾಳಕರ್ ಅವರು ಅಧಿಕಾರ ವಹಿಸಿಕೊಂಡರು.
ಬಳಿಕ ಮಾತನಾಡಿದ ಅವರು, ಪಾರದರ್ಶಕ ಆಡಳಿತಕ್ಕಾಗಿ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿ ಸಹಕಾರ ನೀಡಬೇಕು. ಕಚೇರಿಗೆ ಬರುವ ಜನರಿಗೆ ವಿನಾಕಾರಣ ಅಲೆದಾಡಿಸದೆ ತಕ್ಷಣ ಕೆಲಸ ಮಾಡಿಕೊಡಬೇಕು ಎಂದು ಸಲಹೆ ನೀಡಿದ ಅವರು, ಹಳೆ ಕಡತಗಳು ಯಾವುದೇ ಕಾರಣಕ್ಕೂ ತಮ್ಮ ಗಮನಕ್ಕೆ ತರದೆ ವಿಲೇವಾರಿ ಮಾಡುವಂತಿಲ್ಲ ಎಂದು ಸಿಬ್ಬಂದಿಗಳಿಗೆ ಸೂಚಿಸಿದರು.
ಎಸಿ ಭೇಟಿ: ನಗರಸಭೆ ಪೌರಾಯುಕ್ತ ಸುರೇಶ ಬಬಲಾದ ಅವರ ಅಮಾನತ್ತುಗೊಂಡ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಭವಂರಸಿಂಗ್ ನಗರಸಭೆಗೆ ಭೇಟಿ ನೀಡಿ ಪರಿಶೀಲಿಸಿದರು. ಬುಧವಾರ ಯಾವುದಾದರು ಕಡತ ವಿಲೇವಾರಿ ಮಾಡಲಾಗಿದೆಯೇ? ಹಣ ಪಾವತಿ ಸಂಬಂಧ ಇಂದು ಯಾರಿಗಾದರೂ ಚೆಕ್‌ಗಳನ್ನು ನೀಡಲಾಗಿಯೇ ಎನ್ನುವ ಬಗ್ಗೆ ಸ್ಥಳದಲ್ಲಿದ್ದ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ಪ್ರಶ್ನಿಸಿ ಮಾಹಿತಿ ಪಡೆದರು.