ಬಸವಕಲ್ಯಾಣ: ಕೇಂದ್ರ ಸರ್ಕಾರದಿಂದ ಬಡ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಮಾಡಲಾದ 500 ರೂ. ಹಣ ಡ್ರಾ ಮಾಡಲು ತಾಲೂಕಿನ ರಾಜೇಶ್ವರ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಬಳಿ ಮಹಿಳೆಯರು ಬಿಸಿಲನ್ನೂ ಲೆಕ್ಕಿಸದೆ ಸಾಮಾಜಿಕ ಅಂತರ ಮರೆತು ಸಾಲಿನಲ್ಲಿ ನಿಂತಿದ್ದರು.
ರಾಜೇಶ್ವರ ಗ್ರಾಮದ ಎಸ್‌ಬಿಐ ಬ್ಯಾಂಕ್ ಬಳಿ 70 ವರ್ಷದ ವೃದ್ಧ ಮಹಿಳೆಯರು ಕೂಡ ಸುಡು ಬಿಸಿಲಿನಲ್ಲೇ ನಿಂತಿದ್ದರು. ಖಾತೆಗೆ ಬಂದಿರುವ ಹಣ ತಕ್ಷಣ ಡ್ರಾ ಮಾಡದಿದ್ದಲ್ಲಿ ಸರ್ಕಾರದಿಂದ ಹಣ ವಾಪಾಸ್ ಪಡೆಯಲಾಗುತ್ತದೆ ಎನ್ನುವ ಗಾಳಿ ಸುದ್ದಿ ಹಬ್ಬಿದ್ದರಿಂದ ಮಹಿಳೆಯರು ಬ್ಯಾಂಕ್‌ಗಳಿಗೆ ಧಾವಿಸಿ ಹಣ ಡ್ರಾ ಮಾಡಲು ಮುಗಿಬೀಳುತಿದ್ದರು. ಇಲ್ಲಿ ಸಾಮಾಜಿಕ ಅಂತರವಿಲ್ಲದ ಕಾರಣ ಮಾರಕ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿದೆ.
ಬ್ಯಾಂಕ್ ಬಳಿ ಮಹಿಳೆಯರು ಸಾಲಿನಲ್ಲಿ ನಿಂತಿರುವ ಸುದ್ದಿ ತಿಳಿದ ರಾಜೇಶ್ವರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಗುಂಡುರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ, ಬ್ಯಾಂಕ್‌ಗೆ ಬರುವ ಮಹಿಳೆಯರಿಗೆ ನಿರ್ದಿಷ್ಟ ಸಮಯ ನಿಗದಿ ಮಾಡಿ ಟೋಕನ್‌ಗಳನ್ನು ನೀಡುವ ಕೆಲಸ ಮಾಡಬೇಕು ಎಂದು ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಮಾಡಿದರು.