ಬಸವಕಲ್ಯಾಣ: ಗಡಿಗೆ ಹೊಂದಿಕೊಂಡಿರುವ ಹುಲಸೂರು ತಾಲೂಕು ವ್ಯಾಪ್ತಿಯಲ್ಲಿ ಹೊರ ರಾಜ್ಯದಿಂದ ನೂರಾರು ಜನರು ಆಗಮಿಸುತ್ತಿದ್ದು, ಹೊರಗಿನಿಂದ ಬಂದವರಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಬೇಕು ಎಂದು ಶಾಸಕ ಬಿ.ನಾರಾಯಣರಾವ್ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ಶಾಸಕರು, ಪುಣೆ ಮತ್ತು ಮುಂಬೈ ಸೇರಿದಂತೆ ಹೊರಗಿನಿಂದ ಬಂದವರಿಗೆ ಆರೋಗ್ಯ ತಪಾಸಣೆ ಜೊತೆಗೆ ಅವರಿಗೆ 14 ದಿನಗಳ ಕಾಲ ಮನೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಅಗತ್ಯ ವಸ್ತುಗಳು ಕೆಲವೇ ದಿನಗಳಲ್ಲಿ ಕೈ ಸೇರಲಿವೆ. ಅವುಗಳನ್ನು ಜನರಿಗೆ ವಿತರಿಸಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ವ್ಯಾಟ್ಸ್ಆ್ಯಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಣತಾಣದಲ್ಲಿ ಕಿಡಿಗೇಡಿಗಳು ತಪ್ಪು ಸಂದೇಶ ಹರಡುವ ಮೂಲಕ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಿಸುತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.