ಬೀದರ್: ಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಮತ್ತೆ ಸರ್ಕಾರ ರಚನೆ ಮಾಡಲಿದ್ದು, ಆಡಳಿತ ಅವಧಿಯಲ್ಲಿ ಏನಾದರೂ ಶಾಸಕರು ಕಮಿಷನ್ ಆರೋಪಕ್ಕೆ ಒಳಗಾದರೆ, ಅದು ಒಂದು ಪೈಸೆಯಾಗಿದ್ದರೂ, ಅಂತಹ ಶಾಸಕರನ್ನು ಕಾಂಗ್ರೆಸ್‍ನಿಂದ ತೆಗೆದುಹಾಕುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ಕಾಂಗ್ರೆಸ್ ಎಂದಿಗೂ ಸಹಿಸಲ್ಲ. ರಾಜ್ಯದ ಬಿಜೆಪಿ ಸರ್ಕಾರ ಶೇ.40ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿವೆ. ಇಂಥ ಸರ್ಕಾರದಿಂದ ಜನ ಬೇಸರಗೊಂಡಿದ್ದು, ಮತ್ತೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಒಂದು ಪೈಸೆ ಭ್ರಷ್ಟಾಚಾರದಲ್ಲಿ ಸಹ ಸಿಕ್ಕಿ ಬೀಳುವ ಪಕ್ಷದ ಶಾಸಕರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲಾಗುವುದು. ಇದು ಕಾಂಗ್ರೆಸ್ ವಚನ ಎಂದು ತಿಳಿಸಿದರು.
ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ ಸೇರಿದಂತೆ ಕೆಳ ಸಮುದಾಯದ ಜನರನ್ನು ಮತ್ತಷ್ಟೂ ತುಳಿಯುವ ದುರುದ್ದೇಶದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹತ್ಯೆ ಮಾಡಲು ಬಿಜೆಪಿ ಯೋಜಿಸಿ, ಸಚಿವ ಅಶ್ವತ್ಥನಾರಾಯಣ ಮೂಲಕ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ, ಜೆ.ಪಿ.ನಡ್ಡಾ ಹೇಳಿಸಿದ್ದಾರೆ. ರಾಷ್ಟ್ರಕ್ಕಾಗಿ ಪ್ರಾಣ ನೀಡಿದ ಪಕ್ಷ ಕಾಂಗ್ರೆಸ್. ಸಿದ್ದರಾಮಯ್ಯ ಅವರನ್ನು ಹತ್ಯೆ ಮಾಡಿಸಿದರೆ ಹತ್ತರಷ್ಟು ಸಿದ್ದರಾಮಯ್ಯ ಪಕ್ಷದಲ್ಲಿ ಇದ್ದಾರೆ. ಕಾಂಗ್ರೆಸ್‍ನ್ನು ತಡೆಯುವುದು ಬಿಜೆಪಿಯಿಂದ ಅಸಾಧ್ಯ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಮಾಸಿಕ 2000 ರೂ. ಹಾಗೂ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ. ಭರವಸೆಯ ಈ ಕಾರ್ಡ್‍ಗಳನ್ನು ಪ್ರತಿ ಮನೆಗೆ ಮುಟ್ಟಿಸಬೇಕು. ಪ್ರತಿ ಕ್ಷೇತ್ರದಲ್ಲಿ 20 ತಂಡ ರಚಿಸಿ, ಮನೆ-ಮನೆಗೆ ಭೇಟಿ ನೀಡಬೇಕು. ಈ ಕೆಲಸ 10 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಉಚಿತ ವಿದ್ಯುತ್, ಪ್ರತಿ ತಿಂಗಳು 20 ಸಾವಿರ ರೂ.ಗೆ ಎಲ್ಲಿಂದ ಹಣ ತರುತ್ತೀರಿ ಎಂದು ಜನ ಕೇಳಿದರೆ, ರಾಜ್ಯದ ಬಜೆಟ್ ಮೊತ್ತದಲ್ಲಿ ಶೇ. 40ರಷ್ಟು ಅನುದಾನ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಪಾಲಾಗುತ್ತಿದೆ. ಇದನ್ನು ರಕ್ಷಿಸಿ, ಅದರಲ್ಲಿ ಉಚಿತ ಕೊಡುಗೆಗಳಿಗೆ ಖುರ್ಚು ಮಾಡುತ್ತೇವೆ ಎಂದು ಮನವರಿಕೆ ಮಾಡಬೇಕು. ರಾಜ್ಯದಲ್ಲಿ ಸರ್ಕಾರ ಬಂದ ಮೊದಲ ದಿನವೇ ಉಚಿತ ವಿದ್ಯುತ್ ಮತ್ತು ಮಾಸಿಕ 2 ಸಾವಿರ ರೂ. ಕೊಡುವುದಕ್ಕೆ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿದರು. ಎಐಸಿಸಿ ಕಾರ್ಯದರ್ಶಿ ಶ್ರೀಧರರೆಡ್ಡಿ, ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಮಾಜಿ ಶಾಸಕರಾದ ಅಶೋಕ ಖೇಣಿ, ವಿಜಯಸಿಂಗ್, ಪ್ರಮುಖರಾದ ಚಂದ್ರಾಸಿಂಗ್, ಮೀನಾಕ್ಷಿ ಸಂಗ್ರಾಮ, ಮಾಲಾ ನಾರಾಯಣರಾವ್, ಧನರಾಜ ತಾಳಂಪಳ್ಳಿ, ರಾಜೇಶ್ರೀ ಸ್ವಾಮಿ, ಗೀತಾ ಚಿದ್ರಿ, ಅಮೃತರಾವ್ ಚಿಮಕೋಡೆ, ದತ್ತು ಮೂಲಗೆ ಇತರರಿದ್ದರು.
ಇದನ್ನೂ ಓದಿ: 'ಅತ್ಯಂತ ವಿಫಲ ವಿದೇಶಾಂಗ ಸಚಿವ': ಜೈಶಂಕರ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ