ಬಸವಕಲ್ಯಾಣ(ಬೀದರ್): ಹಿಂದೂ ಪರ ಸಂಘಟನೆಗಳ ಮೇಲೆ ದಾಖಲಿಸಲಾಗಿರುವ ಕೇಸ್‌ಗಳನ್ನು ಹಿಂಪಡಿಯುವಂತೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಬಸವಕಲ್ಯಾಣ ಯುವಕರ ನಿಯೋಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ವಿಧಾನ ಪರಿಷತ್ ಚುನಾವಣೆ ಪ್ರಚಾರ ಹಾಗೂ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳುವ ಸಂಬಂಧ ಸೋಮವಾರ ನಗರಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ ಇಲ್ಲಿಯ ಯುವ ಮುಖಂಡ ಶಿವಕುಮಾರ ಬಿರಾದಾರ ನೇತೃತ್ವದ ಯುವಕರ ನಿಯೋಗದಿಂದ ಬೇಡಿಕೆ ಕುರಿತು ಮನವಿ ಪತ್ರ ಸಲ್ಲಿಸಿತು.
ಬಸವಕಲ್ಯಾಣ ನಗರ ವಿಶ್ವ ಗುರು ಬಸವಣ್ಣವರ ಕಾಯಕ ಭೂಮಿಯಾಗಿದ್ದು, ಇಲ್ಲಿ ಸರ್ವ ಧರ್ಮದವರು ಸಮಾನತೆಯಿಂದ ಬದುಕುತಿದ್ದಾರೆ. 2015ರಲ್ಲಿ ನಗರದಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಮೆರವಣಿಗೆ ನಡೆದ ಮಾರನೆ ದಿನ ಬೆಳಗ್ಗೆ ಹಲವು ಕಾರ್ಯಕರ್ತರನ್ನು ಆರೋಪಿಗಳೆಂದು ಗುರುತಿಸಿ ಬಂಧಿಸಲಾಗಿತ್ತು.
ಈ ಘಟನೆ ನಡೆದ ಕೆಲ ದಿನಗಳ ನಂತರ ಮತ್ತೆ ಸುಮಾರು 60 ಯುವಕರ ಮೇಲೆ ಎರಡನೇ ದೋಷಾರೋಪಣೆ ಪಟ್ಟಿಸಲ್ಲಿಸಿದ್ದಾರೆ. ಅಂದು ಅನೀರಿಕ್ಷಿತವಾಗಿ ಸಂಭವಿಸಿದ ಘಟನೆಯನ್ನೆ ಆಧಾರವನ್ನಾಗಿಸಿಕೊಂಡ ಅಂದಿನ ಪೊಲೀಸ್ ಅಧಿಕಾರಿಗಳು ಅನೇಕ ಜನ ಅಮಾಯಕ ಬಡ ಯುವಕರು, ವಿದ್ಯಾರ್ಥಿಗಳು ಮತ್ತು ಆರ್‌ಎಸ್‌ಎಸ್ ಸಂಘಟನೆಯ ಕಾರ್ಯಕರ್ತರನ್ನು ಗುರಿಯಾಗಿಸಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಪ್ರಕರಣದಲ್ಲಿ ಹೆಸರು ಸೇರಿಸಿದ ಕಾರಣ ಯುವಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಅಮಾಯಕ ಹಿಂದೂ ಯುವಕರ ಮೇಲಿನ ಕೇಸ್‌ಗಳನ್ನು ಹಿಂಪಡೆಯುವಂತೆ ತಾವು ಗೃಹ ಸಚಿವರಿಗೆ ಮನವರಿಕೆ ಮಾಡಿ ಕೊಡುವ ಮೂಲಕ ಯುವಕರಿಗೆ ನ್ಯಾಯ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ. ನಗರಸಭೆ ಮಾಜಿ ಸದಸ್ಯ ಸಂಜು ಮೇಟಗೆ, ಪ್ರಮುಖರಾದ ಅನಿಲ ಸಕ್ಕರಭಾವಿ, ಸಿದ್ದು ಬೋರಗೆ, ಅನೀಲ ಬುಕ್ಕಿಗಾರ, ಶಿವಕುಮಾರ ಅಗ್ರೆ, ದತ್ತಾ ರೆಡ್ಡಿ, ಪ್ರವೀಣ ಮಹಾಜನ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರಮುಖರು ಉಪಸ್ಥಿತರಿದ್ದರು.