ಬೀದರ್: ಡಿಪ್ಲೋಮಾ ಎಂಜಿನಿಯರಿಂಗ್ ಮುಗಿಸಿ ಆಧುನಿಕ ಕೃಷಿ ಪದ್ಧತಿಗೆ ಮುಂದಾದ ಯುವ ರೈತನೊಬ್ಬ ಬೆಳೆದ ಪಪ್ಪಾಯಿ ಮಳೆ ಆರ್ಭಟಕ್ಕೆ ನಾಶವಾಗಿದ್ದು, ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದ ರೈತ ಈಗ ಕಂಗಾಲಾಗಿದ್ದಾನೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದ ಸತೀಶ್ ಸ್ವಾಮಿ ಎಂಬ ಯುವ ರೈತ ಪಪ್ಪಾಯಿ ಬೆಳೆ ಬೆಳೆದಿದ್ದರು. ಫಲವತ್ತಾಗಿ ಬೆಳೆದ ಪಪ್ಪಾಯಿ ಬೆಳೆ, ಕಳೆದ ವಾರ ಸುರಿದ ಸತತ ಮಳೆಗೆ ಹಣ್ಣುಗಳು ಸಂಪೂರ್ಣವಾಗಿ ನಾಶವಾಗಿವೆ.
ಡಿಪ್ಲೋಮಾ ಎಂಜಿನಿಯರಿಂಗ್ ಪದವಿ ಮುಗಿಸಿ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ತನ್ನ 10 ಎಕರೆ ಹೊಲದಲ್ಲಿ ಅಂದಾಜು 10 ಲಕ್ಷ ರೂಪಾಯಿ ಖರ್ಚು ಮಾಡಿ ಪಪ್ಪಾಯಿ ಬೆಳೆದಿದ್ದರು. ಸುಮಾರು 800 ಟನ್ ಪಪ್ಪಾಯಿ ಹಣ್ಣು ಇಳುವರಿ ಬರುವ ನಿರೀಕ್ಷೆಯಲ್ಲಿದ್ದ ಅನ್ನದಾತ ಮಳೆಯಿಂದ ಕಂಗಾಲಾಗಿದ್ದಾನೆ. ಮಳೆ ಅವಾಂತರಕ್ಕೆ ಸಿಲುಕಿ ಎಲ್ಲವೂ ಮಣ್ಣುಪಾಲಾಗಿದೆ. ಅಂದಾಜು ಒಂದು ಕೋಟಿ ರೂಪಾಯಿ ನಷ್ಟವಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.