ಬೀದರ್: ಸಿಖ್ ಸಮುದಾಯ (Sikh community) ಅಂದ್ರೆ ಸಾಕು ಥಟ್ಟನೆ ನೆನಪಿಗೆ ಬರುವುದು ಪಂಜಾಬ್ (Punjab). ಏಕೆಂದರೆ, ಬಹುಸಂಖ್ಯಾತ ಸಿಖ್ ಜನರು ಪಂಜಾಬ್ನಲ್ಲೇ ನೆಲೆಸಿದ್ದಾರೆ. ಆದ್ರೆ ಸಿಖ್ ಸಮುದಾಯದ ಪುಣ್ಯಕ್ಷೇತ್ರ ಗುರುದ್ವಾರ ಕರ್ನಾಟಕದ ಬೀದರ್‌ನ (Bidar) ಹೃದಯಭಾಗದಲ್ಲಿಯೂ ಇರುವುದರಿಂದ ನೇರವಾಗಿ ಪಂಜಾಬ್ ಮತ್ತು ಕರ್ನಾಟಕದ ಮಧ್ಯೆ ಬಾಂಧವ್ಯ ಬೆಸೆದಿದೆ.
ಸುಮಾರು 500 ವರ್ಷಗಳ ಇತಿಹಾಸವಿರುವ ಪವಿತ್ರ ಗುರುದ್ವಾರ ದರ್ಶನಕ್ಕಾಗಿ ದೇಶ ವಿದೇಶದಿಂದ ಸಿಖ್ ಸಮುದಾಯದ ಭಕ್ತರು ಬರ್ತಾರೆ.
ಪಂಜಾಬ್ನ ಅಮೃತಸರದಲ್ಲಿ ಮಹಾರಾಷ್ಟ್ರದ ನಾಂದೇಡದಲ್ಲಿ ಇರುವ ಸಿಖ್ ಸಮುದಾಯದ ಪುಣ್ಯಕ್ಷೇತ್ರದ ಬಿರುದು ಬೀದರ್‌ನ ಗುರುನಾನಕ ಗುರುದ್ವಾರಕ್ಕೂ ಇದೆ. ಸ್ವಾತಂತ್ರ್ಯಾ ನಂತರ ಈ ಬಿಳಿ ಬಣ್ಣದ ವರ್ಣರಂಜಿತ ಪುಣ್ಯಕ್ಷೇತ್ರದ ಅಭಿವೃದ್ಧಿ ಕೆಲಸಗಳು ನಡೆದವು. ಭಕ್ತರ ಸಹಯೋಗದಿಂದ ನಿತ್ಯ ಗುರುಪಾಠ, ಭಜನೆ, ಕೀರ್ತನೆ ನಡೆಯುತ್ತಲೇ ಇದೆ. ಸಾಮಾಜಿಕ ಸಮಾನತೆಯ ಪಾಠವನ್ನು ಅಂದಿನ ಕಾಲದಲ್ಲಿಯೇ ಗುರು ನಾನಕ್ ದೇವರು ಹೇಳಿಕೊಟ್ಟಿದ್ದಾರೆ. 15ನೇ ಶತಮಾನದಲ್ಲಿ ಅವರು ಮಾನವೀಯತೆಯ ಮೌಲ್ಯಗಳ ರಕ್ಷಣೆಯ ಸಂದೇಶ ನೀಡಿದ್ದಾರೆ.
ಗುರುನಾನಕರ ಪವಾಡ ಇಂದಿಗೂ ಜೀವಂತ:
500 ವರ್ಷಗಳ ಹಿಂದೆ ಪ್ರಪಂಚ ಪರ್ಯಟನದಲ್ಲಿದ್ದ ಸಿಖ್ ಸಮುದಾಯದ ಮೊದಲ ಗುರು ಗುರುನಾನಕ್ ಅವರು 1512ರಲ್ಲಿ ಹೈದ್ರಾಬಾದ್ನ ಗೋಲಕುಂಡ ಮೂಲಕ ಬೀದರ್ಗೆ ಬಂದಿದ್ದರಂತೆ. ಆ ವೇಳೆ ಬೀದರ್ ಸುತ್ತಲಿನ ಜನರು ಭೀಕರ ಬರಗಾಲದಿಂದ ತತ್ತರಿಸಿ ಹೋಗಿದ್ದರಂತೆ. ಜನರ ಸಂಕಟವನ್ನು ದೂರ ಮಾಡಲು ಗುರುನಾನಕರು ಆಗಿನ ಬೀದರ್ ನಗರದ ಹೊರವಲಯದ ಗುಡ್ಡವೊಂದಕ್ಕೆ ಬಲಗಾಲಿನಿಂದ ಒದ್ದರಂತೆ. ಆಗ ಚಿಲುಮೆಯ ರೀತಿ ನೀರಿನ ಝರಿ ಹರಿಯಿತು ಎಂಬುದು ಇತಿಹಾಸ. ಈ ಝರಿ ಇಂದಿಗೂ ಹರಿಯುತ್ತಿದೆ. ಬೀದರ್ಗೆ ಬರುವ ಸಿಖ್ ಭಕ್ತರು ಇಲ್ಲಿನ ಗುರುದ್ವಾರದಲ್ಲಿ ದರ್ಶನ ಪಡೆದು ನಂತರ ಇಲ್ಲಿನ ಅಮೃತ ಕುಂಡದ ನೀರನ್ನು ಕೊಂಡೊಯ್ಯುತ್ತಾರೆ. 'ವಾಹೇ ಗುರುದಾ ಖಾಲಸಾ ವಾಹೇ ಗುರುದಾ ಪತೇಹ' ಎನ್ನುವ ಪ್ರಾರ್ಥನೆ ಮಾಡೋದನ್ನು ಯಾರೂ ಮರೆಯುವುದಿಲ್ಲ.
'ಲಂಗರ್' ನಲ್ಲಿ ಸದಾ ದಾಸೋಹ:
ಪವಿತ್ರತಾಣ ಗುರುದ್ವಾರದಲ್ಲಿ ಗುರುನಾನಕರ ಸ್ವರ್ಣ ಮಂದಿರ ಭಕ್ತರನ್ನು ಆಕರ್ಷಿಸಿದರೆ, ಪಕ್ಕದ “ಲಂಗರ್’ನ ವ್ಯವಸ್ಥೆ ಹಸಿದ ಹೊಟ್ಟೆಗಳನ್ನು ತುಂಬಿಸುತ್ತೆ. 15ನೇ ಶತಮಾನದಲ್ಲಿ ಬೀದರ್ಗೆ ಬಂದ ಸಿಖ್ ಸಮುದಾಯದ ಧರ್ಮಗುರು ಗುರುನಾನಕ್ ದೇವ, ಲಂಗರ್ ಮೂಲಕ ಹಸಿದ ಹೊಟ್ಟೆಗೆ ದಾಸೋಹ ಏರ್ಪಾಡು ಮಾಡುತ್ತಿದ್ದರು. ಈ ಲಂಗರ್‌ನ ಭಕ್ಷ ಭೋಜನದ ವ್ಯವಸ್ಥೆ ಇಂದಿಗೂ ಮುಂದುವರಿದಿದೆ. ಹಸಿದವರಿಗೆ, ಬಡವರಿಗೆ ಅನ್ನ, ಆಶ್ರಯ ನೀಡಬೇಕು ಎನ್ನುವುದು ಸಿಖ್ ಧರ್ಮದ ತಿರುಳು. ಅದಕ್ಕಾಗಿಯೇ ಸಿಖ್ಖರ ಶ್ರದ್ಧಾ ಕೇಂದ್ರ ಗುರುದ್ವಾರದಲ್ಲಿ “ಲಂಗರ್’ (ಅನ್ನ ದಾಸೋಹ) ಯಾವಾಗಲೂ ಪ್ರಧಾನವಾಗಿದೆ. ಕೇವಲ ದಾನಿಗಳ ಧನಸಹಾಯ ಮತ್ತು ಸ್ವಯಂ ಸೇವಕರ ಶ್ರಮದಿಂದಲೇ ಈ ದಾಸೋಹ ನಡೆಯುತ್ತಿರುವುದು ವಿಶೇಷ.
ಅಡುಗೆ ತಯಾರಿ, ಊಟ ಬಡಿಸುವುದು, ತಟ್ಟೆ ತೊಳೆಯುವುದು ಸೇರಿದಂತೆ ಇತ್ಯಾದಿ ಎಲ್ಲಾ ಕೆಲಸಗಳನ್ನು ಸ್ವಯಂಸೇವಕರೇ ಮಾಡುವುದು ಲಂಗರ್‌ನ ಮತ್ತೊಂದು ವಿಶೇಷತೆ. ಇಲ್ಲಿ ಬರುವ ಎಲ್ಲಾ ಮಹಿಳಾ ಭಕ್ತರು 'ಕರ ಸೇವಾ' ಹೆಸರಿನಲ್ಲಿ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುವ ಮೂಲಕ ಸೇವೆ ಸಲ್ಲಿಸುತ್ತಾರೆ. ಹೀಗಾಗಿ ಗುರುದ್ವಾರದಲ್ಲಿ ಕಾರ್ಮಿಕರನ್ನು ಬಳಸಿಕೊಳ್ಳಲಾಗುವುದಿಲ್ಲ. ಊಟ ಮಾಡಿದ ಪಾತ್ರೆಗಳನ್ನು ತೊಳೆದರೆ ಅದರಲ್ಲಿ ದೊಡ್ಡ ಪುಣ್ಯ. ಹಾಗೆಯೇ ಭಕ್ತರು ಊಟ ಮಾಡುವಾಗ ಅವರ ಪಾದರಕ್ಷೆಗಳನ್ನು ರಕ್ಷಣೆ ಮಾಡುವುದೂ ಪುಣ್ಯದ ಕೆಲಸವೆಂಬ ಭಾವನೆ ಇಲ್ಲಿಗೆ ಬರುವ ಜನರಲ್ಲಿದೆ.
ಗುರುನಾನಕ್ ಜಲಸಾ:
'ಧರ್ಮಕ್ಕೆ ಸಂಕಟ ಬಂದಾಗ ಯೋಧನಂತೆ ಸದಾ ಸಿದ್ಧನಿರು' ಎಂಬುದು ಸಿಖ್ ಸಮುದಾಯದ ಸಿದ್ಧಾಂತ. ಹಾಗಾಗಿಯೇ ಸಿಖ್ಖರು ಸದಾ ಖಡ್ಗ ಇಟ್ಟಿರುತ್ತಾರೆ. ಇದಕ್ಕೆಂದು 'ಹಲ್ಲಾಬೋಲ್' ಎಂಬ ಸಡಗರದ ಜಲಸಾ ಕೂಡ ಮಾಡ್ತಾರೆ. ಗುರುದ್ವಾರದಿಂದ ಸಿಖ್ ಸಮುದಾಯದ ಸಹಸ್ರಾರು ಜನರು ಕೈಯಲ್ಲಿ ಆಯುಧಗಳನ್ನು ಹಿಡಿದು 'ಹಲ್ಲಾ ಬೊಲ್' ಎನ್ನುವ ಮೂಲಕ ಧರ್ಮ ಗ್ರಂಥವಾದ ಗ್ರಂಥ ಸಾಹೀಬ್ನ ಮೆರವಣಿಗೆ ನಡೆಸುತ್ತಾರೆ. ದೇಶದ ಮೂಲೆ ಮೂಲೆಯಿಂದ ಬಂದು ಸಿಖ್ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.
ವರ್ಣರಂಜಿತ ಉಡುಪು ಮತ್ತು ಕೆಂಪು, ನೀಲಿ, ಹಳದಿ ಬಣ್ಣದ ಪೇಟ ಧರಿಸಿದ್ದ ಸಿಖ್ ಯುವಕರು ಮೆರವಣಿಗೆಯುದ್ದಕ್ಕೂ ಕತ್ತಿವರಸೆ ಪ್ರದರ್ಶನ ಮಾಡ್ತಾರೆ. ಅಮೃತಸರದ ಪಂಚ ಪ್ಯಾರಾ ನೇತೃತ್ವದಲ್ಲಿ ದೇಶದ ವಿವಿಧ ಗುರುದ್ವಾರಗಳಿಂದ ಪಂಚ್ ಪ್ಯಾರೆ ಆಗಮಿಸುತ್ತಾರೆ. ಪಂಚಪ್ಯಾರೆ ಕಮಿಟಿ ಪ್ರತಿ ವರ್ಷ ಬೀದರ್ನಲ್ಲಿ ಜಲಸಾ ಏರ್ಪಾಡು ಮಾಡುತ್ತೆ. ಧರ್ಮಕ್ಕೆ ಅಪಾಯ ಬಂದಾಗ ಧರ್ಮ ರಕ್ಷಣೆಗೆ ಸೈನಿಕನಂತೆ ಮುಂದಾಗುವ ಸಂಕೇತವಾಗಿ ಈ 'ಹಲ್ಲಾ ಬೊಲ್' ಆಚರಿಸಲಾಗುತ್ತೆ. ಇದಕ್ಕಾಗಿ ಮಹಾರಾಷ್ಟ್ರದ ನಾಂದೇಡ ಗುರುದ್ವಾರದಿಂದ ಬೀದರ್ವರೆಗೆ ಧರ್ಮಗ್ರಂಥ 'ಗ್ರಂಥ ಸಾಹೀಬ್' ಮೆರವಣಿಗೆ ಕೂಡ ನಡೆಯುತ್ತೆ. ಗ್ರಂಥ ಸಾಹಿಬ್ ನ ಮೆರವಣಿಗೆ 300 ಕಿಲೋ ಮೀಟರ್ ನಡೆಯುತ್ತಿದ್ದು ಇದಕ್ಕೆ ಸಿಖ್ಖರು ಖಡ್ಗ, ತಲ್ವಾರ್ ಹಿಡಿದು ಪಾರಂಪರಿಕವಾಗಿ ರಕ್ಷಣೆ ಮಾಡ್ತಾರೆ.