ಬೀದರ್ : ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿ ರೈತರ ಬೆಳೆಗಳು ನೀರುಪಾಲಾಗಿದ್ದರಿಂದ ಅಂದಾಜು 1000 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ದಸರಾ ಹಬ್ಬದ ಸಡಗರಕ್ಕೆ ಸಾಕ್ಷಿಯಾಗಬೇಕಾದ ಚೆಂಡು ಹೂವುಗಳನ್ನ ಕೇಳೋರೆ ಇಲ್ಲ. ಹೂ ಬೆಳೆದ ಅನ್ನದಾತರಂತೂ ಇದರಿಂದ ಕಂಗಾಲಾಗಿದ್ದಾರೆ.
ಬೀದರ್ ತಾಲೂಕಿನ ಅಣದೂರು ವಾಡಿ ಗ್ರಾಮದ ದತ್ತಾತ್ರಯ ಪಾಟೀಲ್ ಎಂಬ ರೈತ ಚೆಂಡು ಹೂವುಗಳನ್ನ ತೋಟದಲ್ಲಿ ಬೆಳೆಸಿದ್ದ. ಆದರೆ, ಸತತ ಬಿರುಗಾಳಿ ಮಿಶ್ರತ ಮಳೆಯಿಂದಾಗಿ ಹೂಗಿಡಗಳು ನೆಲಸಮವಾಗಿವೆ. ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚೆಂಡು ಹೂವಿನ ವ್ಯಾಪಾರ ಮಾಡಲು ಮಾಡಿದ್ದ ಎಲ್ಲಾ ತೋಟ ನಾಶವಾಗಿದೆ. ಸರ್ಕಾರ ನಮಗೆ ಪರಿಹಾರ ನೀಡಬೇಕು ಎಂದು ರೈತ ಮನವಿ ಮಾಡಿದ್ದಾನೆ.
ಜಿಲ್ಲೆಯಲ್ಲಿ ಸುಮಾರು 200 ಕೋಟಿಗೂ ಅಧಿಕ ಬೆಲೆಬಾಳುವ ಕಬ್ಬು ಮಳೆಯ ರೌದ್ರಾವತಾರಕ್ಕೆ ಹಾನಿಯಾಗಿದೆ. 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾದ ಸೋಯಾಬಿನ್ ಸೇರಿದಂತೆ ಉದ್ದು, ಹೆಸರು, ತೊಗರಿ ಹಾಗೂ ತೋಟಗಾರಿಕೆ ಬೆಳೆಗಳು ನಾಶವಾಗಿವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.