ಬಸವಕಲ್ಯಾಣ: ತೋಟಗಾರಿಕೆ ಬೆಳೆ ಬೆಳೆಯುವಂತಹ ರೈತರ ಸಮಸ್ಯೆ ಪರಿಹಾರಕ್ಕೆ ಎಪಿಎಂಸಿಯಿಂದ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ನಗರದ ತ್ರಿಪುರಾಂತನ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ ಬಣದ ತಾಲೂಕು ಘಟಕದ ಸಹಯೋಗದೊಂದಿಗೆ ಪಿಕೆಪಿಎಸ್ ಅಧ್ಯಕ್ಷ ಗುಂಡಪ್ಪ ಬಿರಾದಾರ ಹಾಗೂ ರೈತ ಸಂಘದ ಅಧ್ಯಕ್ಷ ಚಂದ್ರಶೇಖರ ಜಮಖಂಡಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೋಟಗಾರಿಕೆ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಿ, ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಕ್ರಮ ಕೈಗೊಳ್ಳಲು ಎಪಿಎಂಸಿಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಲಾಕ್‌ಡೌನ್ ವ್ಯವಸ್ಥೆಯಿಂದ ತೊಟಗಾರಿಕೆ ಬೆಳೆಗಾರರು ಭಾರಿ ನಷ್ಟ ಅನುಭವಿಸುವಂತಾಗಿದೆ. ತರಕಾರಿ, ಹಣ್ಣು ಸೇರಿದಂತೆ ವಿವಿಧ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಗದೇ ನಷ್ಟ ಅನುಭವಿಸಿದ್ದಾರೆ. ನಷ್ಟದ ಬಗ್ಗೆ ಪರಿಶೀಲಿಸಿ ರೈತರಿಗೆ ಆರ್ಥಿಕ ಸಹಾಯ ಕಲ್ಪಿಸಬೇಕು. ತರಕಾರಿ ಮಾರುಕಟ್ಟೆಯಲ್ಲಿ ರೈತರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಆಗ್ರಹಿಸಲಾಯಿತು.
ಇನ್ನು, ರೈತರ ತರಕಾರಿ ಬೆಲೆ ಅವರ ಸಮ್ಮುಖದಲ್ಲಿಯೇ ನಿಗದಿ ಪಡಿಸಬೇಕು ಹಾಗೂ ದರಪಟ್ಟಿಯ ಫಲಕ ಅಳವಡಿಸಬೇಕು. ಹರಾಜು ಪ್ರಕ್ರಿಯೆ ಬೆಳಗ್ಗೆ 7ಕ್ಕೆ ಪ್ರಾರಂಭಿಸಬೇಕು. ತರಕಾರಿ ಮಾರಾಟ ಮಾಡಿದ ರೈತರಿಗೆ ಅದೇ ದಿನದ ಅವಧಿಯವರೆಗೆ ಹಣ ಪಾವತಿಯಾಗಬೇಕು. ಮುದ್ರಣ ಮಾಡಿದ ರಸೀದಿಯನ್ನು ರೈತರಿಗೆ ನೀಡಬೇಕು ಎಂದು ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸುಭಾಷ್ ರಗಟೆ, ರೈತ ಮುಖಂಡರಾದ ಮಸ್ತಾನ ಪಠಾಣ, ಮರೆಪ್ಪಾ ಪಾಟೀಲ, ಅಂಗದರಾವ ಜಗತಾಪ, ಸಂಜೀವ ಕುಂಟೆಗಾವೆ, ಸೇರಿದಂತೆ ತಾಲೂಕಿನ ಅನೇಕ ರೈತರು ಭಾಗವಹಿಸಿದ್ದರು.