ಬೀದರ್: ಬಿಜೆಪಿ ಮುಖಂಡ ಶಾಸಕ ಬಸವನಗೌಡ ಪಾಟೀಲ್ ಮನುಷ್ಯ ಜಾತಿಗೆ ಸೇರಿದವರಲ್ಲ. ದೇಶದ್ರೋಹದ ಹೇಳಿಕೆ ನೀಡುತ್ತಿರುವ ಇವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದರು.
ಭಾಲ್ಕಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರನ್ನು ಪಾಕಿಸ್ತಾನಿ ಏಜೆಂಟ್ ಎಂದು ವಯಸ್ಸಿಗೂ ಮರ್ಯಾದೆ ಕೊಡದೇ ಏಕವಚನದಲ್ಲಿ ಸಂಬೋಧನೆ ಮಾಡಿದ್ದಾರೆ. ಅವರಲ್ಲಿ ಮನುಷ್ಯತ್ವವೇ ಇಲ್ಲ ಎಂದು ಕಿಡಿಕಾರಿದರು.
ದೇಶದ ಸ್ವತಂತ್ರ್ಯಕ್ಕಾಗಿ ಹೋರಾಡಿ ಸ್ವತಂತ್ರ ಭಾರತದ ಪರಿಕಲ್ಪನೆ ತಂದು ಕೊಟ್ಟ ಹೋರಾಟಗಾರರಿಂದ ಶಾಸಕರಾಗಿ, ಸಚಿವರಾಗಿ ಅಧಿಕಾರ ಸವಿದು, ಈಗ ಅಂತಹ ಹೋರಾಟಗಾರರನ್ನು ನಕಲಿ ಹೋರಾಟಗಾರ ಎಂದು ಹುಚ್ಚು ಹುಚ್ಚಾಗಿ ಹೇಳಿಕೆ ನೀಡಿರುವುದು ಇಡಿ ದೇಶಕ್ಕೆ ಮಾಡಿದ ಅಪಮಾನವಾಗಿದೆ. ಇವರನ್ನು ಶಾಸಕ ಸ್ಥಾನದಿಂದ ವಜಾ ಗೊಳಿಸಬೇಕೆಂದು ಆಗ್ರಹಿಸಿದರು.