ಬೀದರ್: ತಲೆಕೆಟ್ಟ ರಕ್ಕಸ ಬೀದಿ ನಾಯಿಯ ಅಟ್ಟಹಾಸಕ್ಕೆ ಬೀದರ್ ಜನತೆ ಬೆಚ್ಚಿ ಬಿದ್ದಿದೆ. 7 ಜನರ ಮೇಲೆ ಆಗಂತುಕ ನಾಯಿ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಗರದ ಚನ್ನಬಸವೇಶ್ವರ ಕಾಲೋನಿಯಲ್ಲಿ ಬೀದಿ ನಾಯಿಯೊಂದು ಮಕ್ಕಳಿಂದ ಹಿಡಿದು ವಯೋವೃದ್ದರನ್ನು ಸೇರಿದಂತೆ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಕಚೇರಿಗೆ ಹೋಗುತ್ತಿದ್ದ ಸಿಬ್ಬಂದಿ ಮೇಲೆ, ಶಾಲೆಗೆ ಹೊಗುತ್ತಿದ್ದ ಮಕ್ಕಳ ಮೇಲೆ, ಮನೆ ಅಂಗಳದಲ್ಲಿ ಆಟವಾಡುವ ಪುಟ್ಟ ಮಕ್ಕಳ ಮೇಲೆ ಎರಗಿದ ಆ ಬೀದಿ ನಾಯಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ನಾಯಿ ಕಾಟದಿಂದ ಬಡಾವಣೆ ಜನರು ಬೆಚ್ಚಿ ಬಿದ್ದಿದ್ದಾರೆ.
ಬೀದಿ ನಾಯಿಯ ಅಟ್ಟಹಾಸದಿಂದ ಬಡಾವಣೆ ಜನರು ನಿದ್ದೆಗೆಟ್ಟಿದ್ದು, ಜನರು ಮನೆಯಿಂದ ಹೊರ ಬರುವಾಗ ಕೈಯಲ್ಲಿ ದೊಣ್ಣೆ, ರಾಡ್ ಹಿಡಿದುಕೊಂಡು ಬರುವಂಥ ಸ್ಥಿತಿ ನಿರ್ಮಾಣವಾಗಿದೆ. ನಗರಸಭೆ ಅಧಿಕಾರಿಗಳು ಬಡಾವಣೆಯಲ್ಲಿ ರೌದ್ರಾವತಾರ ನಡೆಸಿರುವ ನಾಯಿ ಹಾವಳಿಗೆ ಬ್ರೇಕ್ ಹಾಕುವಂತೆ ಜನರು ಆಗ್ರಹಿಸಿದ್ದಾರೆ.