ಬೀದರ್ : ಲಾಕ್‌ಡೌನ್‌ನಿಂದಾಗಿ ಮದ್ಯ ನಿಷೇಧ ಹಿನ್ನೆಲೆ ಕಳ್ಳಭಟ್ಟಿ ಸಾರಾಯಿ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ. ಜಿಲ್ಲೆಯ ಬಹುದೊಡ್ಡ ಕಳ್ಳಭಟ್ಟಿ ಅಡ್ಡೆಯ ಮೇಲೆ ದಾಳಿ ಮಾಡುವಲ್ಲಿ ಭಾಲ್ಕಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ ತಾಂಡದ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರ ತಂಡ ದಾಳಿ ಮಾಡಿ 300 ಲೀಟರ್ ಕಳ್ಳಭಟ್ಟಿ ಕೊಳೆ ನಾಶ ಮಾಡಿದೆ. ಜೊತೆಗೆ 10 ಲೀಟರ್ ಸಾರಾಯಿ ಜಪ್ತಿ ಮಾಡಿಕೊಂಡಿದೆ.
ಭಾಲ್ಕಿ ಗ್ರಾಮೀಣ ಸಿಪಿಐ ವಿಜಯಕುಮಾರ್ ನೇತೃತ್ವದಲ್ಲಿ ಧನ್ನೂರ ಪಿಎಸ್ಐ ಕಾಳಪ್ಪ ಬಡಿಗೇರ, ಸಿಬ್ಬಂದಿಯಾದ ಶಿವರಾಜ ಬಿರಾದರ್, ನಾಗರಾಜ ಹಲಕೇರಿ, ಶರಣು ಬಿರಾದಾರ, ಶಿವಕುಮಾರ ಬನ್ನಿ, ತಾನಾಜಿ ಜಕಾತೆ ದಾಳಿಯಲ್ಲಿದ್ದರು. ಬೀದರ್ ಜಿಲ್ಲೆಯ ಬಹುದೊಡ್ಡ ಅಕ್ರಮ ಕಳ್ಳಭಟ್ಟಿ ಅಡ್ಡೆ ಇದಾಗಿತ್ತು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಬೆಳ್ಳಂ ಬೆಳಗ್ಗೆನೆ ದಂಧೆಕೋರರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.