ಬೀದರ್: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸೋಮವಾರ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಈಗ ಸೋಂಕಿತರ ಸಂಖ್ಯೆ 15 ಕ್ಕೇರಿದೆ. ಇನ್ನೂ 1204 ಜನರ ವರದಿ ಬಾಕಿ ಇದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಈ ಕುರಿತು ಹೊರಡಿಸಿರುವ ಪ್ರಕಟಣೆಯಲ್ಲಿ ದೆಹಲಿ ಜಮಾತ್ಗೆ ಹೋಗಿ ಬಂದವರ ಪ್ರಾಥಮಿಕ ಹಾಗೂ ಎರಡನೇ ಹಂತದ ಸಂಪರ್ಕದಲ್ಲಿದ್ದವರಲ್ಲೇ ಈ ಸೋಂಕು ದೃಢವಾಗಿದೆ.
ನಗರದ ಒಲ್ಡ್ ಸಿಟಿಯಲ್ಲಿ 8 ಹಾಗೂ ಬಸವಕಲ್ಯಾಣ, ಮನ್ನಾಖೆಳ್ಳಿ ತಲಾ ಒಂದೊಂದು ಹೀಗೆ ಶಾಂತವಾಗಿದ್ದ ನಗರದಲ್ಲಿ ಜಮಾತ್ಗೆ ಹೋಗಿ ಬಂದವರಲ್ಲಿ ಒಟ್ಟಾರೆ 10 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಅದಾದ ನಂತರ ಒಲ್ಡ್ ಸಿಟಿಯ 5 ಜನರಲ್ಲಿ ಈ ಸೋಂಕು ವ್ಯಾಪಿಸಿರುವುದು ಪ್ರಯೋಗಾಲಯದಿಂದ ಖಚಿತವಾಗಿದೆ.
ಒಟ್ಟಾರೆ ಪ್ರಯೋಗಾಲಯಕ್ಕೆ ರಕ್ತ ಹಾಗೂ ಗಂಟಲು ದ್ರವದ ಮಾದರಿ ಕಳಿಸಲಾಗಿದ್ದು, 757 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ ಕೂಡ 1204 ಜನರ ವರದಿ ಬರುವುದು ಬಾಕಿ ಇದೆ ಎಂದು ತಿಳಿಸಲಾಗಿದೆ.