ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಾಎಖೇಳ್ಳಿಯ ಅನೇಕ ಬಿಜೆಪಿ ಪಕ್ಷದ ಮುಖಂಡರು, ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಕಾಶೆಂಪೂರ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಶೆಂಪೂರ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಮಂಗಳವಾರ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಕಾಶೆಂಪೂರ, ವಿವಿಧ ಪಕ್ಷಗಳ ಮುಖಂಡರು ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತಸದ ವಿಷಯ. ಮಾಜಿ ಪ್ರಧಾನ ಮಂತ್ರಿಗಳು, ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡರು, ಪಕ್ಷದ ಹಿರಿಯರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂರವರ ಮಾರ್ಗದರ್ಶನದಲ್ಲಿ ನಾವು ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕಾಗಿದೆ. ಜೆಡಿಎಸ್ ಬೆಂಬಲಿತ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿರವರು ನಾಡಿನ ಒಳಿತಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡುವ ಕೆಲಸಗಳನ್ನು ಬೂತ್ ಮಟ್ಟದಿಂದ ಮಾಡಬೇಕು. ಜೆಡಿಎಸ್ ಪಕ್ಷದ ಪ್ರಣಾಳಿಕೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಎಲ್ಲರೂ ಸೇರಿ ಮಾಡೋಣ ಎಂದು ಬಂಡೆಪ್ಪ ಕಾಶೆಂಪೂರ ನೂತನ ಕಾರ್ಯಕರ್ತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಹೇಶ ಚಿಂತಾಮಣಿ, ಗಣಪತಿ ಶಂಭು, ಚನ್ನಮ್ಮಲ್ಲಪ್ಪ ಹಜ್ಜರಗಿ, ನೂತನವಾಗಿ ಸೇರ್ಪಡೆಯಾದ ಮನ್ನಾಎಖೇಳ್ಳಿಯ ವೀರಶೆಟ್ಟಿ ಮಡಿವಾಳ, ಮಲ್ಲಿಕಾರ್ಜುನ ಮಡಿವಾಳ, ಈರಪ್ಪ ಮಡಿವಾಳ, ಬಾಬುರಾವ್ ಮಡಿವಾಳ, ಸಂತೋಷ ಮಡಿವಾಳ, ಬಕ್ಕಪ್ಪ ಮಡಿವಾಳ, ನಾಗಶೆಟ್ಟಿ ಮಡಿವಾಳ, ಅನಿಲ್ ಕುಮಾರ್ ಮಡಿವಾಳ, ರಾಜಕುಮಾರ ಮಡಿವಾಳ, ಕಿರಣ್ ಮಡಿವಾಳ ಸೇರಿದಂತೆ ಅನೇಕರಿದ್ದರು.
ತಿಂಗಳ ಹಿಂದೆ ಜೆಡಿಎಸ್ ಸೇರಿದ್ದ ಬಿಜೆಪಿಗರು: ಕಳೆದ ಒಂದು ತಿಂಗಳಿನಲ್ಲಿ ಅನೇಕ ಬಿಜೆಪಿ ಮುಖಂಡರು ಕಾಶೆಂಪೂರ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದರು. ಕಳೆದ ತಿಂಗಳ ಮಧ್ಯದಲ್ಲಿ ಬೀದರ್ ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಯುವ ಮುಖಂಡರಾಗಿ ಗುರುತಿಸಿಕೊಂಡಿದ್ದ ಬಾವಗಿಯ ಚನ್ನಮಲ್ಲಪ್ಪ ಹಜ್ಜರಗಿ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಚನ್ನಮಲ್ಲಪ್ಪ ಅವರ ಬೆಂಬಲಿಗರಾದ ಮಹೇಶ ಚಿಂತಾಮಣಿ, ಅನಿಲ್ ಪಾಟೀಲ್, ಗಣಪತಿ ಶಂಭು, ಶಿವಾನಂದ ಕುಂಬಾರ, ಮಂದಕನಳ್ಳಿಯ ನೂತನ ಕಾರ್ಯಕರ್ತರಾದ ಗುತ್ತೆಪ್ಪ, ಅನಿಲ ಕುಮಾರ್, ರಘುನಾಥ, ಕಾಂತಪ್ಪ, ಶ್ರೀನಿವಾಸ, ಜಗನಾಥ, ಬಾಬು, ಮಹೇಂದ್ರ, ಭಗವಂತ, ನಾಗಪ್ಪ ಸೇರಿದಂತೆ ಹಲವರು ಈ ವೇಳೆ ಜೆಡಿಎಸ್ ಪಕ್ಷವನ್ನು ಸೇರಿಕೊಂಡಿದ್ದರು. ಹೊಸ ವರ್ಷದ ಪ್ರಾರಂಭದಲ್ಲಿಯೇ ಮತ್ತೆ ಕೆಲವರು ಯುವಕರು ಕಾಶೆಂಪೂರ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದರು.
ಇದನ್ನೂ ಓದಿ: ಶಾಸಕ ಬಂಡೆಪ್ಪ ಕಾಶೆಂಪುರ್ ಸಮ್ಮುಖದಲ್ಲಿ ಜೆಡಿಎಸ್ ಸೇರಿದ ಯುವಕರು