ಬೀದರ್: ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಯುವ ಮುಖಂಡರಾಗಿ ಗುರುತಿಸಿಕೊಂಡಿದ್ದ ಬಾವಗಿಯ ಚನ್ನಮಲ್ಲಪ್ಪ ಹಜ್ಜರಗಿರವರು ತಮ್ಮ ಬೆಂಬಲಿಗರೊಂದಿಗೆ ಮಾಜಿ ಸಚಿವ ಮತ್ತು ಶಾಸಕ ಬಂಡೆಪ್ಪಾ ಕಾಶೆಂಪೂರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾಶೆಂಪೂರ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಜೆಡಿಎಸ್ ಧ್ವಜ ನೀಡುವ ಮೂಲಕ ಚನ್ನಮ್ಮಲ್ಲಪ್ಪ ಹಜ್ಜರಗಿ ಸೇರಿದಂತೆ ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಡೆಪ್ಪಾ ಕಾಶೆಂಪೂರ ಅವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಶಾಸಕ ಕಾಶೆಂಪೂರ, ಚನ್ನಮಲ್ಲಪ್ಪ ಮತ್ತು ಅವರ ತಂಡದವರು ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಎಲ್ಲರೂ ಸೇರಿ ಜೆಡಿಎಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬರು ಕೆಲಸ ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದೊಂದಿಗೆ ನಮ್ಮ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು. ಜೆಡಿಎಸ್ ಬೆಂಬಲಿತ ಸರ್ಕಾರವಿದ್ದಾಗ ಕುಮಾರಸ್ವಾಮಿರವರು ನಾಡಿನ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡುವ ಕೆಲಸ ತಳಮಟ್ಟದಿಂದ ಆಗಬೇಕು. ನಮ್ಮ ಪ್ರಣಾಳಿಕೆಗಳ ಬಗ್ಗೆ ಕೂಡ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಈ ವೇಳೆ ಮಹೇಶ ಚಿಂತಾಮಣಿ, ಅನಿಲ್ ಪಾಟೀಲ್, ಗಣಪತಿ ಶಂಭು, ಶಿವಾನಂದ ಕುಂಬಾರ, ಮಂದಕನಳ್ಳಿಯ ನೂತನ ಕಾರ್ಯಕರ್ತರಾದ ಗುತ್ತೆಪ್ಪ, ಅನಿಲ ಕುಮಾರ್, ರಘುನಾಥ, ಕಾಂತಪ್ಪ, ಶ್ರೀನಿವಾಸ, ಜಗನಾಥ, ಬಾಬು, ಮಹೇಂದ್ರ, ಭಗವಂತ, ನಾಗಪ್ಪ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಹೆಚ್ಚಿದ ಬಂಡಾಯ, ಕಮಲ ಬಿಟ್ಟು ತೆನೆ ಹೊತ್ತ ಮಾಜಿ ಮೇಯರ್