ಬೀದರ್ : ಜಿಲ್ಲೆಯ ಹುಮನಾಬಾದ್ ತಾಲೂಕಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅಪಾಯಕಾರಿಯಾಗಿ ನೇತಾಡಿಕೊಂಡು ಬಸ್ಸಲ್ಲಿ ಪ್ರಯಾಣಿಸುತ್ತಿದ್ದು, ಸಾರಿಗೆ ಇಲಾಖೆ ಗಮನ ಹರಿಸದೆ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿ ಬಂದಿದೆ.
ಹುಮನಾಬಾದ್ ತಾಲೂಕಿನ ಜಲಸಂಗಿ-ದುಬಲಗುಂಡಿ ಭಾಗದಲ್ಲಿ ಬೆಳ್ಳಗಿನ ಹೊತ್ತು ಮಕ್ಕಳು ಶಾಲೆಗೆ ಹೊಗುವ ಸಂದರ್ಭದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಯ ಎಕೈಕ ಬಸ್ ಬರುತ್ತದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಸ್ ಹೊಂದಿರುವುದರಿಂದ, ಈ ಬಸ್ಸನ್ನೇ ಆಶ್ರಯಿಸಬೇಕಾದ ಅನಿವಾರ್ಯತೆಯಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಬಸ್ನಲ್ಲಿ ಸ್ಥಳದ ಕೊರತೆ ಎದುರಾಗಿ ವಿದ್ಯಾರ್ಥಿಗಳು ಬಾಗಿಲಿನಲ್ಲೆ ನೇತಾಡಿಕೊಂಡು ಪ್ರಯಾಣ ಮಾಡುತ್ತಿದ್ದಾರೆ. ಒಂದೇ ಬಸ್ ಬರುವುದರಿಂದ ಬಸ್ ತುಂಬಿ ತುಳುಕುತ್ತಿರುತ್ತವೆ. ಆದ್ದರಿಂದ ಕೆಲ ಮಕ್ಕಳು ಶಾಲೆಗೆ ಹೋದರೆ ಇನ್ನು ಕೆಲವರು ವಾಪಸ್ ಮನೆಗೆ ಹಿಂದುರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ ಏರಿದರರೂ ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗಲು ಆಗದೆ ನೂರಾರು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸಕಾಲಕ್ಕೆ ಬಸ್ ಬಾರದಿರುವುದು ಮತ್ತು ಬಂದ ಬಸ್ನಲ್ಲಿ ಪ್ರಯಾಣಿಸಲು ಅಸಾಧ್ಯವಾಗಿರುವುದು ಈ ಭಾಗದ ಮಕ್ಕಳು ಶಾಲಾ-ಕಾಲೇಜಿಗೆ ಗೈರಾಗುವಂತೆ ಮಾಡಿದೆ. ಇರುವ ಒಂದು ಬಸ್ನಲ್ಲಿ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡುತ್ತಿದ್ದಾರೆ. ಆದ್ದರಿಂದ ಈಶಾನ್ಯ ಸಾರಿಗೆ ಸಂಸ್ಥೆ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಪಾಸ್ ಇರುವ ಶಾಲಾ ಮಕ್ಕಳಿಗಾಗಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.