ಬಸವಕಲ್ಯಾಣ : ನಗರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಕರ್ತವ್ಯಕ್ಕೆ ಗೈರಾದ ಹಿನ್ನೆಲೆ ಕೆಲಕಾಲ ರೋಗಿಗಳು ಪರದಾಡಿದ ಪ್ರಸಂಗ ನಗರದಲ್ಲಿ ಇಂದು ಜರುಗಿತು.
ಶನಿವಾರ ಮಧ್ಯಾಹ್ನ 3ರ ಸುಮಾರಿಗೆ ವಿವಿಧ ಕಾರಣಗಳಿಂದ ಆಸ್ಪತ್ರೆಗೆ ಆಗಮಿಸಿದ ಜನರು, ವೈದ್ಯರು ಇಲ್ಲದ ಕಾರಣ ತೀವ್ರ ಸಮಸ್ಯೆ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಯಿತು.
ದಿನದಿಂದ ದಿನಕ್ಕೆ ಅತೀವವಾಗಿ ಹರಡುತ್ತಿರುವ ಕೊರೊನಾ ಸೋಂಕಿನಿಂದ ಕಂಗೆಟ್ಟಿರುವ ಸಾರ್ವಜನಿಕರು, ಸಣ್ಣಪುಟ್ಟ ಕಾಯಿಲೆಗಳು ಕಾಣಿಸಿಕೊಂಡಲ್ಲಿ ತಕ್ಷಣ ಆಸ್ಪತ್ರೆಗೆ ಧಾವಿಸುವುದು ಸಾಮಾನ್ಯ. ಆದ್ರೆ, ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಜನರ ಸಮಸ್ಯೆಗೆ ಕಾರಣವಾಯಿತು.
ಕೊರೊನಾ ಶಂಕೆ ಹಿನ್ನೆಲೆ ತಪಾಸಣೆಗೆಂದು ಬರುವ ಜನರಿಗೆ ಶನಿವಾರ ಮಧ್ಯಾಹ್ನದಿಂದ ಇಲ್ಲಿ ತಪಾಸಣೆ ಮಾಡಲಾಗುತ್ತಿಲ್ಲ. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಜನರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂದು ಸ್ಥಳದಲಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು.
ನಗರ ಸೇರಿದಂತೆ ತಾಲೂಕಿನಾದ್ಯಂತ ಮಹಾಮಾರಿ ಕೊರೊನಾ ಸೋಂಕಿನ ಆರ್ಭಟ ಶುರುವಾಗಿದೆ. ಸೂಕ್ತ ಚಿಕಿತ್ಸಾ ಸೌಲಭ್ಯ ಸಿಗದ ಕಾರಣ ಪ್ರತಿನಿತ್ಯ 20ಕ್ಕೂ ಅಧಿಕ ಜನ ಸಾಯುತಿದ್ದಾರೆ.
ಇಂತಹ ಕಠಿಣ ಪರಿಸ್ಥಿತಿಯಲ್ಲಾದರೂ ವೈದ್ಯರು ಕರ್ತವ್ಯ ಪ್ರಜ್ಞೆಯಿಂದ ಸೇವೆ ಸಲ್ಲಿಸಿ ಜನರ ಪ್ರಾಣ ರಕ್ಷಣೆಗೆ ಮುಂದಾಗಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅಸ್ಲಾಮ್ ಜನಾಬ್.
ಕೊರೊನಾ ಎರಡನೆ ಅಲೆಯಿಂದಾಗಿ ಪ್ರತಿನಿತ್ಯ ನೂರಾರು ಜನರು ಸೋಂಕಿಗೆ ಒಳಗಾಗಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಧಾವಿಸುತಿದ್ದಾರೆ. ದಿನದ 24 ಗಂಟೆಗಳ ಕಾಲ ಆಸ್ಪತ್ರೆಗೆ ಬರುವ ಜನರಿಗೆ ತಪಾಸಣೆ ಹಾಗೂ ಚಿಕಿತ್ಸೆ ಕಲ್ಪಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ.