ಬಸವಕಲ್ಯಾಣ: ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ ಕೈಗೊಂಡಲ್ಲಿ ಸುಮ್ಮನಿರಲು ಸಾಧ್ಯವಿಲ್ಲ. ಜನರೊಂದಿಗೆ ಸೇರಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಶಾಸಕ ಬಿ.ನಾರಾಯಣರಾವ್ ಹೇಳಿದ್ದಾರೆ.
ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಬಸವಕಲ್ಯಾಣದ ಮಿನಿ ವಿಧಾನ ಸೌಧದ ಬಳಿ ಹಮ್ಮಿಕೊಂಡಿದ್ದ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಏನೂ ತಪ್ಪು ಮಾಡದ ಶಾಹೀನ್ ಶಿಕ್ಷಣ ಸಂಸ್ಥೆ ವಿರುದ್ಧ ವಿನಾಕಾರಣ ಕ್ರಮ ಕೈಗೊಂಡಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದಲ್ಲಿ ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೇಕಿದ್ದರೆ ತಪ್ಪು ಮಾಡಿದ ವ್ಯಕ್ತಿಗಳನ್ನು ಹಿಡಿದು ಜೈಲಿಗೆ ಕಳಿಸಲಿ, ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ, ಆದರೆ ಯಾರೊ ಒಬ್ಬರು ತಪ್ಪು ಮಾಡಿದ್ದಾರೆ ಎನ್ನುವ ವಿಷಯ ಮುಂದೆ ಮಾಡಿ, ಶಾಹೀನ್ ಶಿಕ್ಷಣ ಸಂಸ್ಥೆ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬೇಕು.? ಅದರ ಅನುಮತಿ ಯಾಕೆ ರದ್ದುಪಡಿಸಬೇಕು? ಎಂದು ಪ್ರಶ್ನಿಸಿದರು.
ಯಾರೋ ಮಾಡಿದ ಒಂದು ತಪ್ಪು ಮುಂದಿಟ್ಟುಕೊಂಡು ಇಡೀ ಸಂಸ್ಥೆ ವಿರುದ್ಧವೇ ಕ್ರಮ ಕೈಗೊಳ್ಳುವ ಷಡ್ಯಂತರ ನಡೆಯುತ್ತಿದೆ. ಶಿಕ್ಷಣ ಸಂಸ್ಥೆ ಅನುಮತಿ ರದ್ದು ಮಾಡಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ, ಒಂದು ವೇಳೆ ಸಂಸ್ಥೆ ಅನುಮತಿ ರದ್ದುಗೊಳಿಸಿದಲ್ಲಿ ಸಾರ್ವಜನಿಕರೊಂದಿಗೆ ಸೇರಿ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಜ.26 ರಂದು ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುವಂತಹ ನಾಟಕ ಪ್ರದರ್ಶನ ಮಾಡಿದ ಹಿನ್ನೆಲ್ಲೆಯಲ್ಲಿ ಸಂಸ್ಥೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶಿಕ್ಷಣ ಸಂಸ್ಥೆ ಅನುಮತಿ ರದ್ದು ಗೊಳಿಸಿ, ಸಂಬಂಧಿತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.