ಬೀದರ್: ಅಕ್ರಮವಾಗಿ ಮಾಂಜ್ರಾ ನದಿಯಲ್ಲಿ ಮರಳು ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಭಾಲ್ಕಿ ಡಿವೈಎಸ್ಪಿ ಡಾ.ದೇವರಾಜ್ ಬಿ. ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಮರಳು ಜಪ್ತಿ ಮಾಡಿದ್ದಾರೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ವಾಂಜರಖೇಡಾ ಸೇರಿದಂತೆ ಹಲವು ಗ್ರಾಮಗಳ ಮಾಂಜ್ರಾ ನದಿಯ ದಡದಲ್ಲಿ ಮರಳು ದಂಧೆ ನಡೆಯುತ್ತಿರುವ ಕುರಿತು 'ಮಾಂಜ್ರಾ ನದಿಯಲ್ಲಿ ಅವ್ಯಾಹತ ಮರಳು ಸಾಗಣೆ, ದಂಧೆಕೋರರಿಂದ ಬ್ರೇಕ್ಲೆಸ್ ಅಟ್ಟಹಾಸ' ಎಂಬ ಶೀರ್ಷಿಕೆಯಡಿ 'ಈಟಿವಿ ಭಾರತ' ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಭಾಲ್ಕಿ ಡಿವೈಎಸ್ಪಿ ಡಾ.ದೇವರಾಜ್ ಬಿ ಅವರು, ಮಾಂಜ್ರಾ ನದಿಯ ನಿರ್ಜನ ಪ್ರದೇಶದಲ್ಲಿ ಸಂಚರಿಸಿದಾಗ ಟ್ರಾಕ್ಟರ್, ಟಿಪ್ಪರ್, ಜೆಸಿಬಿ ಸೇರಿದಂತೆ ಅಪಾರ ಪ್ರಮಾಣದ ಅಕ್ರಮ ಮರಳು ದಾಸ್ತಾನು ಪತ್ತೆಯಾಗಿದ್ದವು. ಈ ಕುರಿತು ಅವರು ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಮಾಂಜ್ರಾ ನದಿಯಲ್ಲಿ ಅವ್ಯಾಹತ ಮರಳು ಸಾಗಣೆ, ದಂಧೆಕೋರರಿಂದ ಬ್ರೇಕ್ಲೆಸ್ ಅಟ್ಟಹಾಸ...!
ಈ ಕುರಿತು ಮಾತನಾಡಿದ ಭಾಲ್ಕಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್, ಪೊಲೀಸರು ಗುರುತಿಸಿದ ಅಕ್ರಮ ಮರಳು ಅಡ್ಡೆ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಪತ್ರ ರವಾನಿಸಲಾಗಿದ್ದು, ಅಂದಾಜು ಎಷ್ಟು ಪ್ರಮಾಣದಲ್ಲಿ ಮರಳು ಜಪ್ತಿಯಾಗಿದೆ ಎಂಬುದರ ಕುರಿತು ವರದಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.